ಇದು ರಾಮಕೃಷ್ಣ ಪರಮಹಂಸರು ಆಗಾಗ ಹೇಳುತ್ತಿದ್ದ ಕಥೆ. ನಾವೆಲ್ಲರೂ ನಮ್ಮ ನಮ್ಮ ನಿಜಸ್ವರೂಪದ ಬಗ್ಗೆ ವಿಸ್ಮತಿ ಯನ್ನು ಹೊಂದಿರುತ್ತೇವೆ; ನಮ್ಮ ನೈಜ ಶಕ್ತಿ ಸಾಮರ್ಥ್ಯಗಳು ನಮಗೇ ತಿಳಿದಿರು ವುದಿಲ್ಲ. ಬೆಂಕಿಕಡ್ಡಿಯನ್ನು ಗೀರಿದ ಹಾಗೆ ಯಾರಾದರೊಬ್ಬರು ನಮ್ಮೊಳಗೆಯೂ ಇರುವ ಅಗ್ನಿಯನ್ನು ಉದ್ದೀಪಿಸಬೇಕು ಎನ್ನುವುದನ್ನು ಸೂಚಿಸುವ ಕಥೆ ಇದು. ಪ್ರಾಯಃ ವಿವೇಕಾನಂದರಂತಹ ಬೆಂಕಿಯ ಕಿಡಿ ಹುಟ್ಟಿದ್ದು ರಾಮಕೃಷ್ಣರಿಂದ ಈ ಕಥೆಯನ್ನು ಕೇಳಿ!
ಒಮ್ಮೆ ಒಂದು ಕಾಡಿ ನಲ್ಲಿ ಒಂದು ತಾಯಿ ಹುಲಿ ಮರಿಗೆ ಜನ್ಮ ನೀಡುತ್ತಲೇ ಸತ್ತು ಹೋಯಿತು. ಅನಾಥ ವಾಗಿದ್ದ ಹುಲಿ ಮರಿ ಯನ್ನು ಆಡುಗಳ ಹಿಂಡೊಂದು ತನ್ನೊಳಗೆ ಸೇರಿಸಿಕೊಂಡಿತು. ಆಡು ಮರಿಗಳ ಜತೆಗೆ ಹುಲಿ ಮರಿಯೂ ಒಂದಾಗಿ ಸೇರಿಹೋಯಿತು. ಕಾಲ ಕಳೆದಂತೆ ಹುಲಿಮರಿಯ ಮನಸ್ಸಿನೊಳಗೆ ತಾನು ಕೂಡ ಒಂದು ಆಡುಮರಿ ಎಂಬ ಭಾವನೆ ಬಲವಾಗಿ ಬೇರೂರಿತು. ಸದಾಕಾಲ ಆಡುಗಳ ಜತೆಗೆ ಇರುತ್ತಿದ್ದುª ದರಿಂದ ಅದು ಸಹಜ. ಹುಲಿಮರಿ ಆಡುಗಳ ಹಾಗೆಯೇ ಹುಲ್ಲು ತಿನ್ನುತ್ತಿತ್ತು, “ಮೆಹೆಹೆ… ಮೆಹೆಹೆ…’ ಎಂದು ಅರಚುತ್ತಿತ್ತು. ಅದು ಕನಸಿನಲ್ಲಿ ಕೂಡ ತಾನೊಂದು ಹುಲಿಮರಿ ಎಂದು ಯೋಚಿಸುತ್ತಿರಲಿಲ್ಲ. ಹುಲಿಮರಿಯಾಗಿ ದ್ದರೂ ಆಡುಮರಿ ಎಂದೇ ಕಾಯಾ ವಾಚಾ ಮನಸಾ ನಂಬಿತ್ತು ಅದು.
ಕಾಲ ಹೀಗೆಯೇ ಸರಿಯುತ್ತಿತ್ತು. ಒಂದು ದಿನ ಒಂದು ವಯಸ್ಸಾದ ಹುಲಿಯ ಕಣ್ಣಿಗೆ ಆಡುಗಳ ಈ ಹಿಂಡು ಬಿತ್ತು. ಅದು ನಂಬಲಾರದೆ ಎರಡೆರಡು ಬಾರಿ ಕಣ್ಣು ತಿಕ್ಕಿಕೊಂಡಿತು – ಆಡುಗಳ ಹಿಂಡಿನ ನಡುವೆ ಒಂದು ಯುವ ಹುಲಿ, ಆಡುಗಳಂತೆಯೇ ವರ್ತಿಸುವ ಹೆಬ್ಬುಲಿ, ಆಡುಗಳಂತೆ ನಡೆಯುವ, ಹುಲ್ಲು ತಿನ್ನುವ ಪಾಪದ ಹುಲಿ!
ಹಳೆಯ ಹುಲಿ ಎಲ್ಲ ಆಡುಗಳನ್ನು ಬಿಟ್ಟು ಆಡು ಹುಲಿಯನ್ನೇ ಹಿಡಿಯಿತು. ಎಲ್ಲ ಆಡುಗಳು ಓಡಿಹೋದವು. ಹುಲಿಯ ಬಾಯಿಗೆ ಸಿಲುಕಿದ ಆಡು ಹುಲಿ ಥರಥರನೆ ನಡುಗುತ್ತಿತ್ತು, ಅರಚು ತ್ತಿತ್ತು. ಆದರೆ ಹುಲಿ ಅದನ್ನು ಬಲವಂತ ವಾಗಿ ಹತ್ತಿರದ ಕೊಳದ ಬಳಿಗೆ ಎಳೆದು ಕೊಂಡು ಹೋಯಿತು. ತಪ್ಪಿಸಿಕೊಳ್ಳಲು ಆಡು ಹುಲಿ ಎಷ್ಟೇ ಪ್ರಯತ್ನ ಪಟ್ಟರೂ ಹುಲಿ ತನ್ನ ಪಟ್ಟು ಸಡಿಲಿಸಲಿಲ್ಲ.
ಕನ್ನಡಿಯಂತೆ ನಿಶ್ಚಲವಾಗಿದ್ದ ಕೊಳದ ನೀರಿನಲ್ಲಿ ಆಡು ಹುಲಿಗೆ ತನ್ನ ಮುಖ ದರ್ಶನವಾಯಿತು, ಹತ್ತಿರದಲ್ಲಿಯೇ ಹಳೆಯ ಹುಲಿಯ ಮುಖವೂ ಕಂಡಿತು. “ಎಲಾ, ನಾನು ಆಡಿ ನಂತಿಲ್ಲ, ಹುಲಿಯನ್ನು ಹೋಲುತ್ತಿದ್ದೇನಲ್ಲ’ ಅಂದು ಕೊಂಡಿತದು. ಆದರೆ ಈ ನಂಬಿಕೆಯ ಬದಲಾವಣೆ ಅಷ್ಟು ಸುಲಭವಾದದ್ದಲ್ಲ. ತನ ಗಾದ ಜ್ಞಾನೋದಯದಲ್ಲೇ ಏನೋ ಮೋಸವಿರಬಹುದು ಎಂದು ಕೊಂಡಿ ತದು. ಆಗಲೂ ಅದರ ದೇಹ ಜೀವಭಯದಿಂದ ಥರಗುಡುತ್ತಿತ್ತು. ಆದರೂ ಒಂದು ಹೊಸ ಬೆಳಕು ಅದರೊಳಗೆ ಹೊಕ್ಕುಬಿಟ್ಟಿತ್ತು. ಅದು ಕೊಂಚ ತಲೆಯೆತ್ತಿ ನಡೆಯ ಲಾರಂಭಿಸಿತು.
ದೊಡ್ಡ ಹುಲಿ ಅದನ್ನು ತನ್ನ ಗುಹೆಗೆ ಕರೆದೊಯ್ದಿತು. ಅಲ್ಲಿ ಮಾಂಸವನ್ನು ತಿನ್ನಲು ಕೊಟ್ಟಿತು. ಮೊದಲಿಗೆ ವಾಕರಿಕೆ ಬಂದರೂ ಒಂದು ಚೂರನ್ನು ಜಗಿಯಲು ಆರಂಭಿಸಿದಾಗ ಹೊಸ ಹುಲಿಯ ಅಂತಃಪ್ರಜ್ಞೆಯ ಮೂಲೆ ಯಲ್ಲಿ ಮಲಗಿದ್ದ ಹುಲಿಸಹಜ ಪ್ರಕೃತಿ ಎಚ್ಚೆತ್ತುಕೊಂಡಿತು. ಮಾಂಸದ ರುಚಿ ನೋಡಿದ್ದೇ ತಡ, ಭರ್ಜರಿ ಗರ್ಜ ನೆಯೂ ಹೊರ ಬಿದ್ದಿತು. ಈಗ ಆಡು ಹುಲಿ ಪೂರ್ಣ ಹುಲಿಯಾಗಿ ಬದಲಾ ಯಿತು. ಆಡು ಮಾಯವಾಯಿತು.
ಇಡೀ ಪ್ರಕ್ರಿಯೆ ಹೀಗಿರುತ್ತದೆ. ನಮಗೂ ಒಂದು ಹಳೆಯ ಹುಲಿಯ ಸಂಸರ್ಗಕ್ಕೆ ಬರುವ ಅಗತ್ಯವಿರುತ್ತದೆ. ಆ ಹಳೆಯ ಹುಲಿ ನಮ್ಮನ್ನು ಬದಲಾವಣೆ ಯತ್ತ ಪಟ್ಟು ಹಿಡಿದು ಕರೆದೊಯ್ಯ ಬೇಕಿರುತ್ತದೆ. ಆರಂಭದಲ್ಲಿ ನಾವು ಕೊಸರಾಡುತ್ತೇವೆ, ಅಪನಂಬಿಕೆಯಲ್ಲಿ ಮಿಸುಕಾಡುತ್ತೇವೆ.ಕೊಟ್ಟ ಕೊನೆಗೆ ಪ್ರಜ್ಞೆಯ ಆಳದಲ್ಲಿ ಮಲಗಿದ್ದ ಶಕ್ತಿ ಎಚ್ಚರಗೊಳ್ಳುತ್ತದೆ.
(ಸಾರ ಸಂಗ್ರಹ)