Advertisement

ಜೀವನ್‌ರಾಜ್‌: ಅಂಧತ್ವ ಮರೆಯಿಸಿದ ಸಾಧನೆ

02:29 PM May 23, 2018 | Team Udayavani |

ಬದಿಯಡ್ಕ: ಎಂಡೋಸಲ್ಫಾನ್‌ ಕೀಟನಾಶಕದಿಂದ ಅಂಧತ್ವಕ್ಕೆ ಗುರಿಯಾಗಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ಜೀವನ್‌ ರಾಜ್‌ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ್ದಾನೆ.

Advertisement

ಕಾಸರಗೋಡು ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ ಜೀವನ್‌ರಾಜ್‌ ಎಣ್ಮಕಜೆಯ ಪುಷ್ಪಲತಾ- ಈಶ್ವರ ದಂಪತಿಯ ಪುತ್ರ. ಪರೀಕ್ಷೆಯಲ್ಲಿ ಐದು ವಿಷಯಗಳಲ್ಲಿ ಇವನಿಗೆ ಎ ಪ್ಲಸ್‌ ಗ್ರೇಡ್‌ ಲಭಿಸಿದೆ. ಇತರ ವಿಷಯಗಳಲ್ಲಿ ಎರಡು ಬಿ ಪ್ಲಸ್‌, ಒಂದು ಎ, ಒಂದು ಬಿ ಮತ್ತೊಂದು  ಸಿ ಪ್ಲಸ್‌ ಗ್ರೇಡ್‌ ಲಭಿಸಿದೆ. ತನ್ನದೇ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಹರೀಶ್‌ನ ಸಹಾಯದೊಂದಿಗೆ ಜೀವನ್‌ರಾಜ್‌ ಪರೀಕ್ಷೆ ಬರೆದಿದ್ದಾನೆ. ಪಾಠ ಭಾಗಗಳನ್ನು ಧ್ವನಿ ಮುದ್ರಣ ಮಾಡಿ ಕೇಳುವುದು ಜೀವನ್‌ ರಾಜ್‌ನ ಕಲಿಕೆಯ ವಿಧಾನ. ಅಗತ್ಯ ವಾಹನ ಸೌಕರ್ಯಗಳಿಲ್ಲದ ದೂರದ ಎಣ್ಮಕಜೆಯಿಂದ ಬಂದು ಕಾಸರಗೋಡಿನ ಪ್ರೀಮೆಟ್ರಿಕ್‌ ಹಾಸ್ಟೆಲ್‌ನಲ್ಲಿದ್ದು ವಿದ್ಯಾಭ್ಯಾಸ ನಡೆಸುತ್ತಿದ್ದಾನೆ.

ಮಿಮಿಕ್ರಿ ಪಟು
ಈತನಿಗೆ ಎಂಡೋಸಲ್ಫಾನ್‌ ಸಂತ್ರಸ್ತರ ಪಿಂಚಣಿ ಲಭಿಸುತ್ತಿದ್ದರೂ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬವಾಗಿದೆ. ತಂದೆ ಈಶ್ವರ ನಾಯ್ಕ ಕೂಲಿ ಕೆಲಸ ಮಾಡುತ್ತಾರೆ. ಹುಟ್ಟಿನಿಂದಲೇ ಕಣ್ಣಿನ ದೃಷ್ಟಿ ಸಾಮರ್ಥ್ಯ ಕಳೆದುಕೊಂಡರೂ ಪಠ್ಯ- ಪಠ್ಯೇತರ ವಿಷಯಗಳಲ್ಲಿ ಮುಂದಿರುವ ಜೀವನ್‌ರಾಜ್‌ಗೆ ಶಬ್ದಲೋಕವೇ ಪ್ರಪಂಚ. ಶಬ್ದಗಳಿಂದಲೇ ಪ್ರಕೃತಿಯನ್ನು ಅರಿತುಕೊಳ್ಳುವ ಜನವಿಭಾಗವೊಂದರ ದನಿಯಾಗಿ ಜೀವನ್‌ರಾಜ್‌ ರಾಜ್ಯಮಟ್ಟದ ಶಾಲಾ ಕಲೋತ್ಸವದ ವೇದಿಕೆಯೇರಿ ಈ ವರ್ಷದ ರಾಜ್ಯ ಕಲೋತ್ಸವದಲ್ಲಿ ಪ್ರೌಢಶಾಲಾ ವಿಭಾಗದ ಮಿಮಿಕ್ರಿ ಸ್ಪರ್ಧೆಯಲ್ಲಿ ಎ ಗ್ರೇಡ್‌ ಪಡೆದುಕೊಂಡಿದ್ದಾನೆ. ಇವನ ಸಹೋದರ ದೇವಿಕಿರಣ್‌ಗೂ ಅಂಧತ್ವವಿದೆ.

ಕಂಪ್ಯೂಟರ್‌, ಸ್ಮಾರ್ಟ್‌ ಫೋನ್‌ನ್ನು ಚೆನ್ನಾಗಿ ಉಪಯೋಗಿಸುವ ಜೀವನ್‌ರಾಜ್‌ ಮಿಮಿಕ್ರಿಯ ನವೀನತೆಗಾಗಿ ಯೂ ಟ್ಯೂಬ್‌ ನ ಸಹಾಯವನ್ನು ಪಡೆಯುತ್ತಾನೆ. ಗೂಗಲ್‌ ಟಾಕ್‌ ಬ್ಯಾಕ್‌ ವ್ಯವಸ್ಥೆ ಉಪಯೋಗಿಸಿ ಸ್ಮಾರ್ಟ್‌ ಫೋನ್‌ ಬಳಸುತ್ತಿದ್ದಾನೆ. 

ಬದುಕೇ ಸವಾಲು
ಎಂಡೋಸಲ್ಫಾನ್‌ ಸಂತ್ರಸ್ತ ಜೀವನದ ದುರಂತ ಕಥೆಗಳೆಲ್ಲವನ್ನೂ ಸದ್ಯಕ್ಕೆ ಮರೆಯಲು ಪ್ರಯತ್ನಿಸುತ್ತಿದ್ದೇನೆ. ದೊಡ್ಡವನಾದ ಮೇಲೆ ಕಾಲೇಜು ಪ್ರಾಧ್ಯಾಪಕನಾಗುವ ಆಸೆಯಿದೆ. ಕೊನೆಯುಸಿರಿನ ವರೆಗೆ ಇತರರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ನಮ್ಮಂತೆ ಬದುಕೇ ಸವಾಲಾಗಿರುವ ಮಂದಿಯ ಬಾಳಲ್ಲಿ ಬೆಳಕು ಹರಿಸುವ ಪ್ರಯತ್ನ ಮಾಡಬೇಕು. ಐಐಟಿಯಲ್ಲಿ ಎಂಟ್ರೆನ್ಸ್‌ ಪರೀಕ್ಷೆ ಬರೆಯಬೇಕು ಎಂಬ ಕನಸಿದೆ.
 -ಜೀವನ್‌ರಾಜ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next