Advertisement

ಕೋವಿಡ್ ಔಷಧ ಪ್ರಯೋಗಕ್ಕೆ ಜೀವನರೇಖಾ ಆಸ್ಪತ್ರೆ ಆಯ್ಕೆ

03:59 PM Jul 04, 2020 | Suhan S |

ಬೆಳಗಾವಿ: ಕೋವಿಡ್ ಮಹಾಮಾರಿ ದೇಶದ ಎಲ್ಲ ಕಡೆ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಸಮಾಧಾನಕರ ಸಂಗತಿಯೊಂದು ಹೊರಬಂದಿದೆ. ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದಿರುವ ಕೋವ್ಯಾಕ್ಸಿನ್‌ ಔಷಧಿ ಈಗ ಪ್ರಯೋಗಕ್ಕೆ ಸಿದ್ಧವಾಗಿದ್ದು, ಎಲ್ಲ ಅಂದುಕೊಂಡಂತೆ ಯಶಸ್ವಿಯಾದರೆ ಮುಂದಿನ ತಿಂಗಳು ಸಾರ್ವಜನಿಕರಿಗೆ ಲಭ್ಯವಾಗುವ ನಿರೀಕ್ಷೆ ಇದೆ.

Advertisement

ಇದರ ಮಧ್ಯೆ ದೇಶದ 13 ಕಡೆಗಳಲ್ಲಿ ಜನರ ಮೇಲೆ ಇದರ ಪ್ರಯೋಗ ನಡೆಯಲಿದ್ದು, ಈ 13 ನಗರಗಳಲ್ಲಿ ಬೆಳಗಾವಿ ಸಹ ಆಯ್ಕೆಯಾಗಿರುವುದು ಹೊಸ ಬೆಳವಣಿಗೆಯಾಗಿದೆ. ಬೆಳಗಾವಿಯಲ್ಲಿ ಮುಂದಿನ ವಾರದಿಂದ ಇದರ ಪ್ರಯೋಗ ಆರಂಭವಾಗಲಿದೆ. ಬೆಳಗಾವಿ ನಗರದ ಜೀವನರೇಖಾ ಆಸ್ಪತ್ರೆಯನ್ನು ಕೇಂದ್ರ ಸರಕಾರ ಈ ಕೋವಿಡ್ ಔಷಧಿ ಪ್ರಯೋಗಕ್ಕೆ ಆಯ್ಕೆ ಮಾಡಿದ್ದು, ಶೀಘ್ರದಲ್ಲೇ ಈ ಆಸ್ಪತ್ರೆಯಲ್ಲಿ ಸಾರ್ವಜನಿಕರ ಮೇಲೆ ಔಷಧಿಯ ಪ್ರಯೋಗ ನಡೆಯಲಿದೆ. ಇದಕ್ಕಾಗಿ ಸುಮಾರು 200 ಜನ ಆರೋಗ್ಯವಂತ ಸ್ವಯಂ ಸೇವಕರನ್ನು ಗುರುತಿಸಲಾಗುತ್ತಿದೆ. ಈಗಾಗಲೇ ಕೆಲವರು ಹೆಸರು ಸಹ ನೋಂದಣಿ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಬೆಳಗಾವಿಯ ಒಂದೇ ಆಸ್ಪತ್ರೆಯನ್ನು ಆಯ್ಕೆ ಮಾಡಲಾಗಿದೆ. ಈಗ ಸುಮಾರು 100 ರಿಂದ 200 ಜನರ ಮೇಲೆ ಮಾಡುವ ಪ್ರಯೋಗದ ಪರಿಣಾಮವನ್ನು ಗುರುತಿಸಿದ ಬಳಿಕ ಈ ಔಷಧಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಮುಂದಿನ ವಾರದಿಂದ ಇದರ ಪ್ರಯೋಗ ನಡೆಯಲಿದ್ದು, ನಂತರ ಇದರ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್‌) ಕಳಿಸಲಾಗುವದು ಎಂದು ಜೀವನ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ| ಅಮಿತ್‌ಭಾತೆ ಉದಯವಾಣಿಗೆ ಹೇಳಿದರು.

ಸಂಪೂರ್ಣ ಸ್ವದೇಶಿ ಔಷಧಿಯಾಗಿರುವ ಕೋವ್ಯಾಕ್ಸಿನ್‌ನ್ನು ಕೇಂದ್ರ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಭಾರತ್‌ ಬಯೋಟೆಕ್‌ ಇಂಟರ್‌ ನ್ಯಾಶನಲ್‌ ಲಿಮಿಟೆಡ್‌ ಸಂಸ್ಥೆಯ ಜೊತೆಗೂಡಿ ಸಿದ್ಧಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next