ಕಲಘಟಗಿ: ಹಟಕಿನಾಳ ಗ್ರಾಮದ ಸಣ್ಣ ನೀರಾವರಿ ಇಲಾಖೆಯ ಜಿಗಳಿ ಕೆರೆಯ ಬಂಡು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಪುನರ್‌ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಕಲ್ಪಿಸುವಂತೆ ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಲು ಪ್ರಸ್ತಾವನೆ ತಯಾರಿಸುವಂತೆ ಶಾಸಕ ಸಿ.ಎಂ. ನಿಂಬಣ್ಣವರ ಅಧಿಕಾರಿಗಳಿಗೆ ಸೂಚಿಸಿದರು.
ಮೂರ್‍ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಒಡ್ಡು ಒಡೆದಿರುವ ಹಟಕಿನಾಳದ ಜಿಗಳಿ ಕೆರೆಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅವರು ಮಾತನಾಡಿದರು. ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿರುವ ತಾಲೂಕಿನ 52 ಕೆರೆಗಳ ಭದ್ರತೆ ಕುರಿತು ಪರಿಶೀಲಿಸಿ ವರದಿ ಸಲ್ಲಿಸಬೇಕು. ಅಲ್ಲದೇ ಜಿಗಳಿ ಕೆರೆಯ ಸಂಪೂರ್ಣ ಬದುವಿನ ಪುನರ್ ನಿರ್ಮಾಣಕ್ಕೆ ಅವಶ್ಯಕ ಎಲ್ಲ ಮಾಹಿತಿಯೊಂದಿಗೆ ಪ್ರಸ್ತಾವನೆಯನ್ನು ಶೀಘ್ರದಲ್ಲಿಯೇ ನಿರ್ಮಿಸಿ ಸಲ್ಲಿಸುವಂತೆ ಅಭಿಯಂತರಿಗೆ ಆದೇಶಿಸಿದರು.
ಸಣ್ಣ ನೀರಾವರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಎಚ್.ಟಿ.ನಟೇಶ ಹಾಗೂ ಕಿರಿಯ ಅಭಿಯಂತ ದುಗೇìಶಕುಮಾರ ಮಾಹಿತಿ ನೀಡಿ, ಸುಮಾರು 27 ಎಕರೆ ಪ್ರದೇಶ ವಿಸ್ತೀರ್ಣ ವ್ಯಾಪ್ತಿಯಲ್ಲಿ 8.43 ಎಂಸಿಎಫ್‌ಟಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಜಿಗಳಿ ಕೆರೆಯು 545 ಮೀಟರ್ ಉದ್ದದ ಬಂಡನ್ನು ಹೊಂದಿದೆ. ಕೆರೆ ಒಡಲು ಸಂಪೂರ್ಣ ತುಂಬಿದಲ್ಲಿ ನೂರಾರು ಎಕರೆ ಜಮೀನಿಗೆ ನೀರಾವರಿ ಮಾಡಬಹುದು. ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಒಳಹರಿವು ಹೆಚ್ಚಿ ಕೆರೆಯ ಒಡ್ಡು ಒಡೆದಿದೆ. ಕೆರೆಯಲ್ಲಿ ಶೇಖರಣೆಯಾದ ನೀರು ಸಂಪೂರ್ಣ ಖಾಲಿಯಾಗಿದೆ ಎಂದು ವಿವರಿಸಿದರು.
ರೈತರ ಅಳಲು: ಜಿಗಳಿ ಕೆರೆಯ ಒಡ್ಡು ಒಡೆದು ಅಪಾರ ಪ್ರಮಾಣದಲ್ಲಿ ನೀರು ಹೊರಹೊಮ್ಮಿ ಜಮೀನಿಗೆ ನುಗ್ಗಿರುವುದರಿಂದ ತಗ್ಗು ಪ್ರದೇಶದಲ್ಲಿನ ಸುಮಾರು 20ರಿಂದ 25 ಎಕರೆ ಜಮೀನಿನಲ್ಲಿ ಬೆಳೆದ ಭತ್ತ ಹಾಗೂ ಕಬ್ಬಿನ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಹಾನಿಯುಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ಅದಕ್ಕೆ ಉತ್ತರಿಸಿದ ಶಾಸಕರು, ಬೆಳೆ ಹಾನಿ ಕುರಿತು ಸಮರ್ಪಕವಾದ ಯಾದಿಯನ್ನು ಕೃಷಿ ಹಾಗೂ ಕಂದಾಯ ಇಲಾಖೆಯವರು ತಕ್ಷಣ ತಯಾರಿಸಿ ರೈತರಿಗೆ ಶೀಘ್ರ ಪರಿಹಾರ ಒದಗಿಸುವಂತೆ ತಹಶೀಲ್ದಾರ್ ಅಶೋಕ ಶಿಗ್ಗಾವಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಎನ್.ಎಫ್.ಕಟ್ಟೇಗೌಡರ ಅವರಿಗೆ ಸೂಚಿಸಿದರು.
ಶಾಸಕರ ಆಪ್ತಸಹಾಯಕ ಮಾರುತಿ ಹಂಚಿನಮನಿ, ಬಿಜೆಪಿ ಪ್ರಮುಖರಾದ ನಿಂಗಪ್ಪ ಸುತಗಟ್ಟಿ, ಯಲ್ಲಾರಿ ಶಿಂಧೆ, ಮಲ್ಲಯ್ಯಸ್ವಾಮಿ ಗುಡಿಮನಿ, ಕಂದಾಯ ಇಲಾಖೆಯ ಎಂ.ಕೆ. ಶಿಂಪಿ, ಗ್ರಾಮಸ್ಥರಾದ ಹೋಮಣ್ಣ ಕೂಡಲಗಿ, ಶಿವನಗೌಡ ದೊಡಮನಿ, ಪರಶುರಾಮ ಕೂಡಲಗಿ, ಶಂಕ್ರಯ್ಯ ಹಿರೇಮಠ, ಚನ್ನಬಸಯ್ಯ ಗುಡಿಮನಿ, ಗಂಗಯ್ಯ ದೊಡಮನಿ, ವಿಜಯಕುಮಾರ ಮಿರಾಶಿ, ಶಿವಾನಂದ ದೊಡಮನಿ, ಜಗದೀಶ ಹಿರೇಮಠ, ಸಿದ್ಧು ಗುಡಿಮನಿ ಇದ್ದರು. ಶಾಸಕರಿಂದ ಒಡ್ಡು ಒಡೆದ ಸ್ಥಳ ಪರಿಶೀಲನೆಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.