ನವದೆಹಲಿ:ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಎರಡು ಬಾರಿ ಜೆಇಇ ಮೇನ್ ಪರೀಕ್ಷೆ ಮುಂದೂಡಲ್ಪಟ್ಟಿತ್ತು. ಇದೀಗ ಕೋವಿಡ್ 19 ಮುಂಜಾಗ್ರತಾ ಕ್ರಮದೊಂದಿಗೆ ಮಂಗಳವಾರ (ಸೆಪ್ಟೆಂಬರ್ 01, 2020) ಬೆಳಗ್ಗೆ ಜೆಇಇ ಮೇನ್ ಪರೀಕ್ಷೆ ಆರಂಭಗೊಂಡಿದೆ.
ಬಿಜೆಪಿಯೇತರ ರಾಜ್ಯಗಳ ವಿರೋಧದ ನಡುವೆಯೇ ಈ ಪರೀಕ್ಷೆಗಳು ನಿಗದಿಯಂತೆ ನಡೆಯುತ್ತಿದೆ. 8.58 ಲಕ್ಷ ವಿದ್ಯಾರ್ಥಿಗಳು ಜೆಇಇ ಮೇನ್, 15.97 ಲಕ್ಷ ವಿದ್ಯಾರ್ಥಿಗಳು ಸೆಪ್ಟೆಂಬರ್ 13ರಂದು ನೀಟ್ ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ.
ಮುನ್ನೆಚ್ಚರಿಕಾ ಅಂಗವಾಗಿ ಪರೀಕ್ಷಾ ಕೇಂದ್ರ ಸಂಖ್ಯೆಯನ್ನು ಕೂಡಾ 570ರಿಂದ 660ಕ್ಕೆ ಏರಿಸಲಾಗಿದೆ. ಜೆಇಇ ಮೇನ್, ನೀಟ್ ಪರೀಕ್ಷೆ ನಡೆಸಲು ಎಲ್ಲಾ ರಾಜ್ಯಗಳು ಸಹಕಾರ ನೀಡಬೇಕೆಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಮನವಿ ಮಾಡಿಕೊಂಡಿದ್ದಾರೆ.
ಈ ವರ್ಷ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷೆಯ ಸಂದರ್ಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ನಡುವೆ ಅಂತರ ಇರುವಂತೆ ನೋಡಿಕೊಳ್ಳಬೇಕು. ಜೆಇಇ ಮೇನ್ ಪರೀಕ್ಷೆಯಲ್ಲಿ ಒಂದು ದಿನಕ್ಕೆ ಎರಡು ಶಿಫ್ಟ್ ನಂತೆ ಒಟ್ಟು ಆರು ದಿನಗಳಲ್ಲಿ 12 ಶಿಫ್ಟ್ ಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ವರದಿ ತಿಳಿಸಿದೆ.
ಬೆಳಗ್ಗೆ 9ರಿಂದ 12ಗಂಟೆಗೆ ಮೊದಲ ಶಿಫ್ಟ್, 3ರಿಂದ 6ಗಂಟೆವರೆಗೆ ಎರಡನೇ ಶಿಫ್ಟ್ ಇರಲಿದೆ ಎಂದು ವರದಿ ತಿಳಿಸಿದೆ. ಜೆಇಇ ಮೇನ್ ಪರೀಕ್ಷೆ ಬರೆಯಲು ಹಲವು ವಿದ್ಯಾರ್ಥಿಗಳು ಬಸ್ ಗಳಲ್ಲಿ ಆಗಮಿಸಿದ್ದರು.