Advertisement

ಉನ್ನತ ಶಿಕ್ಷಣದಲ್ಲಿ ಯುರೋಪ್‌ ಒಕ್ಕೂಟದ ಸಹಕಾರ ವೃದ್ಧಿ

12:46 PM Jul 13, 2018 | Team Udayavani |

ಉಡುಪಿ: ಇತ್ತೀಚೆಗೆ ನಡೆದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಯುರೋಪಿಯನ್‌ ಕಮಿಷನ್‌ನ ಅಧ್ಯಕ್ಷ ಜೀನ್‌ ಕ್ಲಾಡ್‌ ಜುಂಕರ್‌ ಮತ್ತು ಯುರೋಪಿಯನ್‌ ಕೌನ್ಸಿಲ್‌ನ ಅಧ್ಯಕ್ಷ ಡೊನಾಲ್ಡ್‌ ಟಸ್ಕ್ ಅವರು ಉನ್ನತ ಶಿಕ್ಷಣ ಕ್ಷೇತದಲ್ಲಿ ಪರಸ್ಪರ ಸಹಕಾರ ವೃದ್ಧಿಸಿಕೊಳ್ಳುವ ಬದ್ಧತೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಭಾರತ ಮತ್ತು ಯುರೋಪ್‌ ಒಕ್ಕೂಟದ ನಡುವಿನ ಉನ್ನತ ಶಿಕ್ಷಣ ಸಹಕಾರ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತಕ್ಕೆ ಯುರೋಪಿಯನ್‌ ಒಕ್ಕೂಟ ನಿಯೋಗದ ಹಂಗಾಮಿ ಮುಖ್ಯಸ್ಥ ರೇಮಂಡ್‌ ಮ್ಯಾಜಿಸ್‌ ಹೇಳಿದ್ದಾರೆ.

Advertisement

ಮಣಿಪಾಲದ ಡಾ| ಟಿ.ಎಂ.ಎ ಪೈ ಸಭಾಂಗಣದಲ್ಲಿ ಜರಗಿದ “ಮಣಿಪಾಲ್‌ ಹೈಯರ್‌ ಎಜುಕೇಶನ್‌ ಮೀಟ್‌’ ಉದ್ಘಾಟನ ಸಮಾರಂಭದಲ್ಲಿ ಅವರು ವೀಡಿಯೋ ಸಂದೇಶ ನೀಡಿದರು. ಯುರೋಪಿಯನ್‌ ಒಕ್ಕೂಟದ ಪ್ರೋತ್ಸಾಹಕ ಕಾರ್ಯಕ್ರಮಗಳ ನೆರವಿ ನಿಂದ ಭಾರತದ 120ಕ್ಕೂ ಅಧಿಕ ವಿ.ವಿ.ಗಳು ಸುಧಾರಣಾ ಪ್ರಕ್ರಿಯೆಗಳನ್ನು ಅಳವಡಿಸಿಕೊಂಡು ಅಂತಾರಾಷ್ಟ್ರೀಯವಾಗಿ ಸ್ಪರ್ಧಾತ್ಮಕವಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಸಮ್ಮೇಳನವನ್ನು ಉದ್ಘಾಟಿಸಿ ಮಾತ ನಾಡಿದ ಜರ್ಮನಿಯ ಬ್ರಿಮೆನ್‌ ವಿ.ವಿ.ಯ ಪ್ರೊ| ಫ್ರೆಡ್ರಿಚ್‌ ಲೆಹ್ಮನ್‌ ಅವರು, ಕಳೆದ ಮೂರು ದಶಕಗಳಲ್ಲಿ ಬ್ರಿಮೆನ್‌ ವಿ.ವಿ. ಮತ್ತು ಮಣಿಪಾಲ ವಿ.ವಿ.ಗಳ ನಡುವಿನ ಸಹಕಾರ ವೃದ್ಧಿಯಾಗಿದೆ ಎಂದರು.

ಶೈಕ್ಷಣಿಕ ಚಿಂತನೆಗಳು ಉದಾತ್ತ
ಅಧ್ಯಕ್ಷತೆ ವಹಿಸಿದ್ದ ಮಾಹೆ ಕುಲಪತಿ ಡಾ| ಎಚ್‌. ವಿನೋದ್‌ ಭಟ್‌ ಅವರು, ಶೈಕ್ಷಣಿಕ ಚಿಂತನೆಗಳು ರಾಜಕೀಯ ಚಿಂತನೆಗಳಿಗಿಂತ ಭಿನ್ನವಾಗಿವೆ. ರಾಜಕೀಯ ಚಿಂತನೆಗಳು ಒಳಮುಖವಾಗಿವೆ. ಆದರೆ ಶೈಕ್ಷಣಿಕ ಚಿಂತನೆಗಳು ಹೊರಮುಖ ಮತ್ತು ಉದಾತ್ತವಾಗಿವೆ. ಹೆಚ್ಚು ಹೆಚ್ಚು ಸಂಪರ್ಕ ಮತ್ತು ಸಹಭಾಗಿತ್ವದ ಮೂಲಕ ಈ ಚಿಂತನೆಗಳನ್ನು ಮತ್ತಷ್ಟು ವಿಸ್ತಾರಗೊಳಿಸಬೇಕಾಗಿದೆ ಎಂದರು.
ಬರ್ಲಿನ್‌ ಟೆಕ್ನಿಕಲ್‌ ವಿ.ವಿ.ಯ ಉಲ್‌ರಿಚ್‌ ಪೊಡ್‌ವಿಲ್ಸ್‌ ಪ್ರಧಾನ ಉಪನ್ಯಾಸ ನೀಡಿದರು. ಸಮ್ಮೇಳನದ ಸಂಚಾಲಕಿ ಪ್ರೊ| ನೀತಾ ಇನಾಮ್‌ದಾರ್‌ ಸ್ವಾಗತಿಸಿದರು. ಡಾ| ರಘು ರಾಧಾಕೃಷ್ಣನ್‌ ಕಾರ್ಯಕ್ರಮ ನಿರ್ವಹಿಸಿದರು. ಯುರೋಪಿಯನ್‌ ಒಕ್ಕೂಟದ ಅನುದಾನದೊಂದಿಗೆ ಮೂರು ದಿನಗಳ ಈ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದ್ದು, ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣ ಮತ್ತು ಸೌಹಾರ್ದತೆ ಕುರಿತಾಗಿ ಯುರೋಪ್‌ ಮತ್ತು ಇತರ ವಿವಿಗಳ ಶೈಕ್ಷಣಿಕ ತಜ್ಞರು ವಿಚಾರ ಮಂಡಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next