ಪಟ್ನಾ: ಬಿಹಾರದಲ್ಲಿ ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್‌ನ ಮಹಾಘಟಬಂಧನ್‌ನಲ್ಲಿ ಬಿರುಕು ಕಾಣಿಸಿಕೊಂಡಿರುವುದು ಭಾನುವಾರ ಇನ್ನಷ್ಟು ಸ್ಪಷ್ಟಗೊಂಡಿದ್ದು, ಆರ್‌ಜೆಡಿ ಕರೆ ನೀಡಿರುವ ಬಿಜೆಪಿ ಹಟಾವೋ ದೇಶ್ ಬಚಾವೋ ರಾಲಿಗೆ ಜೆಡಿಯು ಗೈರಾಗಲು ನಿರ್ಧರಿಸಿದೆ.
ಅಗಸ್ಟ್ 27 ರಂದು ಕೇಂದ್ರ ಸರ್ಕಾರ ವಿರೋದಿ ಬೃಹತ್ ಸಮಾವೇಶ ನಡೆಸಲು ಆರ್‌ಜೆಡಿ ತೀರ್ಮಾನಿಸಿದೆ.
ಇದು ಆರ್‌ಜೆಡಿ ಕರೆ ನೀಡಿರುವ ರಾಲಿ ನಾವೇಕೆ ಭಾಗಿಯಾಗಬೇಕು. ನಾವು ಭಾಗಿಯಾಗದೇ ಇದ್ದರೂ ಮೈತ್ರಿ ಹಾಗೆಯೇ ಭದ್ರವಾಗಿ ಮುಂದುವರಿಯಲಿದೆ ಎಂದು ಜೆಡಿಯು ಮುಖಂಡ ಶ್ಯಾಮ್ ರಾಜಕ್ ಹೇಳಿಕೆ ನೀಡಿದ್ದಾರೆ.
ಆರ್‌ಜೆಡಿ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ , ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಸ್‌ಪಿ ನಾಯಕ ಅಖೀಲೇಶ್ ಯಾದವ್ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾಗಿಯಾಗುವ ಸಾಧ್ಯತೆಗಳಿವೆ.
ಈಗಾಗಲೆ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರಿಗೆ ಜೆಡಿಯು ಬೆಂಬಲ ಸೂಚಿಸಿದ್ದು, ಇದು ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್‌ಗೆ ಇರಿಸು ಮುರಿಸು ಉಂಟು ಮಾಡಿತ್ತು.
ಕಾಂಗ್ರೆಸ್ ಮತ್ತು ಆರ್‌ಜೆಡಿ ಗೈರಾಗಿದ್ದ ಜಿಎಸ್‌ಟಿ ಮಧ್ಯರಾತ್ರಿ ಅಧಿವೇಶನಕ್ಕೆ ನಿತಿಶ್ ಕುಮಾರ್ ಅವರು ಸಂಪುಟ ಸದಸ್ಯನನ್ನು ಕಳುಹಿಸಿಕೊಟ್ಟಿದ್ದರು.
ಮೈತ್ರಿ ಮುರಿದು ಬಿದ್ದರೆ ನಿತಿಶ್ ಕುಮಾರ್‌ಗೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿಕೆ ನೀಡಿದ್ದಾರೆ.
243 ಸದಸ್ಯ ಬಲದ ವಿಧಾನಸಭೆಯಲ್ಲಿ ಆರ್‌ಜೆಡಿ 80 ಸ್ಥಾನ, ಜೆಡಿಯು 71 ಮತ್ತು ಕಾಂಗ್ರೆಸ್ 27 ಸ್ಥಾನಗಳನ್ನು ಹೊಂದಿವೆ. ಬಿಜೆಪಿ 53 ಸೇರಿದಂತೆ ಮಿತ್ರಪಕ್ಷಗಳು ಒಟ್ಟಾಗಿ 58 ಸ್ಥಾನಗಳನ್ನು ಹೊಂದಿವೆ.