ಪಟ್ನಾ: ಎನ್‌ಡಿಎ ಜತೆಗಿನ 2 ದಶಕಗಳ ಮೈತ್ರಿ ಕಡಿದುಕೊಂಡು ಹೊರಹೋಗಿದ್ದ ಜೆಡಿಯು “ಘರ್ ವಾಪ್ಸಿ’ ಯಶಸ್ವಿಯಾಗಿ ನಡೆದಿದೆ. ಸ್ನೇಹ ಕಡಿದು ಕೊಂಡ 4 ವರ್ಷಗಳ ಬಳಿಕ ಈಗ ಮತ್ತೆ ಎನ್‌ಡಿಎ ತೆಕ್ಕೆಗೆ ಜೆಡಿಯು ಸೇರ್ಪಡೆಗೊಂಡಿದೆ. ಪಕ್ಷದ ನಾಯಕ ಶರದ್ ಯಾದವ್ ಹಾಗೂ ಕೆಲವು ನಾಯಕರ ಅಸಮಾಧಾನ, ಎರಡೂ ಬಣಗಳ ಕಾರ್ಯಕರ್ತರ ಘರ್ಷಣೆಯ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಶನಿವಾರ ಪಟ್ನಾದಲ್ಲಿ ನಡೆದ ಪಕ್ಷದ ಕಾರ್ಯ ಕಾರಿಣಿಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಎನ್‌ಡಿಎಗೆ ಸೇರ್ಪಡೆಗೊಳ್ಳುವ ಬಗ್ಗೆ ಅಧಿಕೃತ ನಿರ್ಧಾರ ಕೈಗೊಂಡಿತು. ಬಿಹಾರದಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್ ಜತೆಗೆ ಮಾಡಿಕೊಂಡಿದ್ದ ಮಹಾಮೈತ್ರಿಯಿಂದ ಹೊರಹೋಗುವ ಮತ್ತು ಎನ್‌ಡಿಎ ಜತೆ ಸೇರ್ಪಡೆಗೊಳ್ಳುವ ನಿರ್ಣಯಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಒಪ್ಪಿಗೆ ಪಡೆಯಲಾಯಿತು. ಈ ಹಿನ್ನೆಲೆಯಲ್ಲಿ ಜೆಡಿಯುಗೆ ಕೇಂದ್ರದ ಮೋದಿ ಸಂಪುಟದಲ್ಲಿ ಎರಡು ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಕಾರ್ಯಕಾರಿಣಿ ಬಳಿಕ ನಿರ್ಣಯದ ಕುರಿತು ಘೋಷಣೆ ಮಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ, ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು ಮೂಡಿಲ್ಲ ಹಾಗೂ ಭಿನ್ನಾಭಿಪ್ರಾಯಗಳೂ ತಲೆದೋರಿಲ್ಲ ಎಂದು ಸ್ಪಷ್ಟಪಡಿಸಿದರು. ಜತೆಗೆ, ಕಳೆದ ವಾರ ನಮ್ಮ ಅಧ್ಯಕ್ಷ ನಿತೀಶ್ ಕುಮಾರ್ ಅವರ ದಿಲ್ಲಿ ಭೇಟಿ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಪಕ್ಷಕ್ಕೆ ಅಧಿಕೃತ ಆಹ್ವಾನ ನೀಡಿದ್ದರು. ಅದಕ್ಕೆ ಈಗ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಒಪ್ಪಿಗೆ ನೀಡಿದೆ. ಹೀಗಾಗಿ, ಇಂದಿನಿಂದಲೇ ನಾವು ಎನ್‌ಡಿಎಯ ಭಾಗವಾದೆವು ಎಂದು ಹೇಳಿದರು.
ಶರದ್-ನಿತೀಶ್ ಬೆಂಬಲಿಗರ ಘರ್ಷಣೆ: ಅತ್ತ ನಿತೀಶ್ ನಿವಾಸದಲ್ಲಿ ಕಾರ್ಯಕಾರಿಣಿ ನಡೆಯುತ್ತಿದ್ದರೆ, ಹೊರಗೆ ಶರದ್ ಯಾದವ್ ಹಾಗೂ ನಿತೀಶ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಶರದ್ ಅವರ ಜನಅದಾಲತ್ ಸಭೆಗೆಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಅವರ ಬೆಂಬಲಿಗರು ಏಕಾಏಕಿ ಸಿಎಂ ನಿತೀಶ್‌ರ ಮನೆ ಮುಂದೆ ವಾಹನಗಳನ್ನು ನಿಲ್ಲಿಸಿ ಘೋಷಣೆ ಕೂಗತೊಡಗಿದರು. ಈ ಪೈಕಿ ಕೆಲವರು ಕಲ್ಲುಗಳು ಹಾಗೂ ಬೆಲ್ಟ್ ಹಿಡಿದುಕೊಂಡು ನಿತೀಶ್ ನಿವಾಸಕ್ಕೆ ನುಗ್ಗಲು ಯತ್ನಿಸಿದರು. ಆಗ ನಿತೀಶ್ ಬೆಂಬಲಿಗರು ಮತ್ತು ಶರದ್ ಬೆಂಬಲಿಗರ ನಡುವೆ ಘರ್ಷಣೆ ಏರ್ಪಟ್ಟಿತು. ಈ ಸಂದರ್ಭದಲ್ಲಿ ಕಾರಿನೊಳಗೆ ಕುಳಿತಿದ್ದ ಶರದ್‌ರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, “ನಾನು ಇಲ್ಲೇನೂ ಹೇಳಲ್ಲ. ಕಾರ್ಯಕ್ರಮದಲ್ಲೇ ಮಾತನಾಡುತ್ತೇನೆ’ ಎಂದು ಹೇಳಿ ಮುಂದೆ ಸಾಗಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.