ಪಟ್ನಾ: ಬಿಹಾರದಲ್ಲಿ ವಿಧಾನ ಸಭಾ ಚುನಾವಣೆಯ ಕಾವು ನಿಧಾನವಾಗಿ ಏರುತ್ತಿದೆ. ಈ ಮಧ್ಯೆ ರಾಜಕೀಯ ಪಕ್ಷಗಳೂ ಸಹ ಬಿರುಸಿನ ಚುನಾವಣಾ ತಯಾರಿಯಲ್ಲಿ ತೊಡಗಿವೆ. ಇತ್ತ ಮರಳಿ ಅಧಿಕಾರಕ್ಕೇರುವ ಸಂಕಲ್ಪದೊಂದಿಗೆ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿರುವ ಎನ್.ಡಿ.ಎ. ಮೈತ್ರಿಕೂಟ ಈ ಬಾರಿ 200 ಸೀಟುಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದೆ.
ಮೈತ್ರಿಕೂಟದ ಪ್ರಮುಖ ಅಂಗಪಕ್ಷ ಜೆಡಿ(ಯು) ಮುಖ್ಯಸ್ಥ ಹಾಗೂ ಹಾಲೀ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭಾನುವಾರ ಈ ವಿಚಾರವನ್ನು ಹೊರಗೆಡಹಿದ್ದಾರೆ.
ತನ್ನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಿತೀಶ್ ಕುಮಾರ್ ಅವರು ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟ ಅತೀ ಹೆಚ್ಚಿನ ಅಂದರೆ 200 ಸೀಟುಗಳನ್ನು ಗೆಲ್ಲುವಲ್ಲಿ ನೀವೆಲ್ಲರೂ ಶ್ರಮ ಹಾಕಬೇಕು ಎಂದು ತನ್ನ ಪಕ್ಷದ ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ.
ಕಾಂಗ್ರೆಸ್ ಮತ್ತು ಆರ್.ಜೆ.ಡಿ. ಪಕ್ಷಗಳ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲದಂತೆ ನೋಡಿಕೊಳ‍್ಳಬೇಕು ಎಂದೂ ಸಹ ನಿತೀಶ್ ಇದೇ ಸಂದರ್ಭದಲ್ಲಿ ತನ್ನ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಒಟ್ಟು 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಪ್ರಸ್ತುತ ಎನ್.ಡಿ.ಎ. ಮೈತ್ರಿಕೂಟ 124 ಸದಸ್ಯರನ್ನು ಹೊಂದಿದ್ದು ಇವರಲ್ಲಿ ಜೆಡಿ(ಯು)ನ 70 ಮತ್ತು ಬಿಜೆಪಿಯ 54 ಶಾಸಕರಿದ್ದಾರೆ.
ಪ್ರಮುಖ ವಿರೋಧ ಪಕ್ಷವಾಗಿರುವ ಆರ್.ಜೆ.ಡಿ. 80 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ 26 ಸ್ಥಾನಗಳನ್ನು ಹೊಂದಿದೆ. ಜೆಡಿಯು, ಬಿಜೆಪಿ ಮತ್ತು ಎಲ್.ಜೆ.ಪಿ. ಸಹಿತವಾಗಿರುವ ಎನ್.ಡಿ.ಎ. ಮೈತ್ರಿಕೂಟ ಐವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 131 ಸ್ಥಾನಗಳನ್ನು ಹೊಂದಿದೆ. ಇಲ್ಲಿ ಸರಳ ಬಹುಮಕ್ಕೆ 122 ಸ್ಥಾನಗಳ ಅಗತ್ಯವಿದೆ.