ಅರಸೀಕೆರೆ: ಗ್ರಾಪಂ ಸದಸ್ಯರಿಂದ ದೇವರ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿಸಿಕೊಂಡು ತಮ್ಮ ಪಕ್ಷಕ್ಕೆ ಶಾಸಕರು ಸೇರಿಸಿಕೊಂಡಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಮಾಡಿರುವ ಆರೋಪಕ್ಕೆ ಬೇಷರತ್ ಕ್ಷಮೆ ಕೇಳಬೇಕು ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಅಡವಿಸ್ವಾಮಿ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಪಂ ಚುನಾವಣೆಯಲ್ಲಿ ವಿದ್ಯಾವಂತರು, ಪ್ರಜ್ಞಾವಂತರು ಆಯ್ಕೆ ಆಗಿದ್ದಾರೆ. ದೇವರ ಹೆಸರಿನಲ್ಲಿ ಶಾಸಕರು ಆಣೆ ಮಾಡಿಸಿಕೊಂಡು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂಬ ಬಾಲಿಶ ಹೇಳಿಕೆ ನೀಡಿ, ಚುನಾಯಿತ ಜನಪ್ರತಿ ನಿಧಿಗಳಿಗೆ ಪರೋಕ್ಷವಾಗಿ ಅಗೌರವ ಸೂಚಿಸಿರುವ ಕಾರಣ, ಸಂತೋಷ್ ಕ್ಷೇತ್ರದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಅರಿತು ನಡೆಯಲಿ: ಜನಪ್ರತಿನಿಧಿಗಳನ್ನು ಹೊತ್ತೂಯ್ಯುವ, ಬ್ಲಾಕ್ ಮೇಲ್ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಸಂತೋಷ್ ಅವರ ತಂತ್ರ ಈ ಕ್ಷೇತ್ರದಲ್ಲಿ ನಡೆಯಲ್ಲ, ಮಾಧ್ಯಮದ ಮೂಲಕ ಇಲ್ಲಸಲ್ಲದ ಹೇಳಿಕೆ ನೀಡಿ, ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದನ್ನು ಕ್ಷೇತ್ರದ ಪ್ರಜ್ಞಾವಂತ ಮತದಾರರು ಒಪ್ಪುವುದಿಲ್ಲ ಎಂಬುದು ಸಂತೋಷ್ ಅರಿಯಲಿ ಎಂದು ಮಾರ್ಮಿಕವಾಗಿ ನುಡಿದರು.
ಅಭಿವೃದ್ಧಿ ನೋಡಿದ್ದಾರೆ: ರಾಜ್ಯದಲ್ಲಿ ನೆಲೆಯಿಲ್ಲದೆ ಆಗೊಮ್ಮೆ ಈಗೊಮ್ಮೆ ಕ್ಷೇತ್ರಕ್ಕೆ ಬಂದು ಸಲ್ಲದ ಹೇಳಿಕೆ ನೀಡುವ ಮೂಲಕ ಜನರ ಮನಸ್ಸು ಕದಡುವ ಸಂತೋಷ್ ಅವರ ಕಾರ್ಯವೈಖರಿ ಹಾಗೂ ಅವರ ಮನಸ್ಥಿತಿ ಈಗಾಗಲೇ ಅರಿತಿರುವ ಜನರು, ಶಾಸಕ ಕೆ.ಎಂ.ಶಿವಲಿಂಗೇಗೌಡ ತಮ್ಮ 13 ವರ್ಷಗಳು ಅವಧಿಯಲ್ಲಿ ಮಾಡಿರುವ ಅಭಿವೃದ್ದಿ ಕೆಲಸ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದರು.
ಉಗ್ರ ಪ್ರತಿಭಟನೆ ಎಚ್ಚರಿಕೆ: ನೂತನವಾಗಿ ಆಯ್ಕೆಯಾದ ಗ್ರಾಪಂ ಸದಸ್ಯರು ವಿದ್ಯಾವಂತರು ಹಾಗೂ ಪ್ರಜ್ಞಾವಂತರಿದ್ದು, ತಮ್ಮ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಶಾಸಕರೊಂದಿಗೆ ಕೈ ಜೋಡಿಸಿದ್ದಾರೆ ಎಂಬ ಸತ್ಯವನ್ನು ಸಂತೋಷ ಅವರು ಅರಿತು ಕೊಳ್ಳಲಿ, ಅದನ್ನು ಬಿಟ್ಟು ಇನ್ನು ಮುಂದೆ ನಮ್ಮ ಪಕ್ಷ ಹಾಗೂ ಶಾಸಕರ ವಿರುದ್ಧ ಸಲ್ಲದ ಹೇಳಿಕೆ ನೀಡುವ ವಿಕೃತ ಪ್ರವೃತ್ತಿ ಮುಂದುವರಿಸಿದ್ದೇ ಆದಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ವ್ಯರ್ಥ ಆರೋಪ: ಶಾಸಕ ಕೆ.ಎಂ.ಶಿವಲಿಂಗೇ ಗೌಡರು ಜೆಡಿಎಸ್‌ನಲ್ಲೇ ಮುಂದುವರಿಯು ತ್ತಾರೋ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೋ ಕಾದು ನೋಡಿ ಎನ್ನುವ ಇವರಿಗೆ ಈ ಉಸಾಬರಿಯನ್ನು ಕೊಟ್ಟವರು ಯಾರು ಎಂದು ಸಂತೋಷ್ ಹೇಳಲಿ, ಒಂದು ವೇಳೆ ಶಾಸಕರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಹೋದರೆ ಸಂತೋಷ್ ಬಿಜೆಪಿ ಬಿಟ್ಟು ಜೆಡಿಎಸ್ ಸೇರುತ್ತಾರೆ ಎಂಬುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಅವರೇ ಆಣೆ ಮಾಡಲಿ ಎಂದು ಹೇಳಿದರು.
ಇದನ್ನೂ ಓದಿ :ಬೈಕ್ ಸವಾರರಿಗೆ ಹೆಲ್ಮೆಟ್ ವಿತರಣೆ
ಸುದ್ದಿಗೋಷ್ಠಿಯಲ್ಲಿ ಬೆಳಗುಂಬ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ವಿ.ಜಿ.ರವೀಂದ್ರನಾಥ್, ತಳಲೂರು ಗ್ರಾಪಂ ಸದಸ್ಯರಾದ ಕೆ.ಆರ್. ರಘು. ಕೆ.ಎಸ್.ಕುಮಾರ್, ಬೆಳಗುಂಬ ಗ್ರಾಪಂ ಸದಸ್ಯರಾದ ವೇದಾನಂದಮೂರ್ತಿ, ಜಯಣ್ಣ, ತೋಂಟಾರಾಧ್ಯ ಉಪಸ್ಥಿತರಿದ್ದರು.