ಬೆಂಗಳೂರು: ಆಪರೇಷನ್ ಕಮಲ ಕಾರ್ಯಾಚರಣೆಯಡಿ ಮೂರು ಸ್ಥಾನ ಕಳೆದು ಕೊಂಡು ಐದು ಸ್ಥಾನ ಗೆಲ್ಲುತ್ತೇವೆಂದು ಉಪ ಸಮರದ ಅಖಾಡಗಿಳಿದಿದ್ದ ಜೆಡಿಎಸ್ ಶೂನ್ಯ ಸಂಪಾದನೆ ಮೂಲಕ ಪಕ್ಷದ “ಭದ್ರ ಕೋಟೆ’ಯಲ್ಲಿ ಅಸ್ತಿತ್ವಕ್ಕೆ ಧಕ್ಕೆ ತಂದುಕೊಂಡಿದೆ. ಬಿಜೆಪಿಗೆ ಬಹುಮತ ಬಾರದಿದ್ದರೆ ಕಿಂಗ್ ಮೇಕರ್ ಆಗಿ ರಾಜಕೀಯದಲ್ಲಿ ಮತ್ತೂಂದು ಇನ್ನಿಂಗ್ಸ್ ಪ್ರಾರಂಭಿ ಸುವ ಜೆಡಿಎಸ್ ಕನಸು ಭಗ್ನಗೊಂಡಿದೆ.
ಇದೀಗ ಬಿಜೆಪಿಯತ್ತ ಚಿತ್ತ ಹಾಯಿಸಿರುವ ಮತ್ತಷ್ಟು ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಜತೆಗೆ ಮುಂದಿನ ಮೂರೂವರೆ ವರ್ಷಗಳ ಕಾಲ ಪಕ್ಷ ಸಂಘಟನೆ ದೊಡ್ಡ ಸವಾಲಾಗಿದೆ. ಮಹಾಲಕ್ಷ್ಮಿ ಲೇ ಔಟ್, ಹುಣಸೂರು, ಕೆ.ಆರ್.ಪೇಟೆ ಮತ್ತೆ ವಶಕ್ಕೆ ಪಡೆಯುವಲ್ಲಿ ವಿಫಲ ವಾಗುವ ಜತೆಗೆ ಯಶವಂತಪುರ, ಚಿಕ್ಕಬಳ್ಳಾ ಪುರದಲ್ಲಿ ಡಿ.ಕೆ.ಶಿವಕುಮಾರ್ “ಸಹ ಕಾರ’ ಇದ್ದರೂ ಗೆಲ್ಲಲು ಸಾಧ್ಯವಾಗದೆ ಹಳೇ ಮೈಸೂರು ಭಾಗದಲ್ಲಿ ಶಕ್ತಿ ಕಳೆದು ಕೊಳ್ಳು ವಂತಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಖಾತೆ ತೆರೆಯುವ ಆಸೆಯೂ ಕೈಗೂಡ ದಂತಾಗಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿದರೂ ಮತದಾರರ ಒಲವು ಗಳಿಸಲು ಸಾಧ್ಯವಾಗಿಲ್ಲ. ಪಕ್ಷಕ್ಕೆ ವರ್ಚಸ್ವಿ ನಾಯಕರು ಹಾಗೂ ಸಮರ್ಥ ಅಭ್ಯರ್ಥಿಗಳ ಕೊರತೆಯಿಂದಾಗಿ ಮತದಾರರ ಒಲವು ಗಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಮಂಡ್ಯ ಜೆಡಿಎಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿತ್ತು. ಮಂಡ್ಯ ಲೋಕಸಭೆ ಚುನಾ ವಣೆ ಯಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಸೋತ ನಂತರ ಇದೀಗ ಕೆ.ಆರ್.ಪೇಟೆಯಲ್ಲಿ ಸೋಲು ಪಕ್ಷಕ್ಕೆ ಆಘಾತವಾಗಿದೆ.
ಮಹಾಲಕ್ಷ್ಮಿ ಲೇಔಟ್‌ನಲ್ಲಿ ಒಕ್ಕಲಿಗ ಸಮು ದಾಯದ ಬೆಂಬಲದಿಂದ ಗೋಪಾಲಯ್ಯ ಜೆಡಿಎಸ್‌ನಿಂದ ಗೆಲ್ಲುತ್ತಿದ್ದರು. ತಮ್ಮನ್ನು ಬಿಟ್ಟು ಬಿಜೆಪಿ ಸೇರಿರುವ ಅವರಿಗೆ ಪಾಠ ಕಲಿಸ ಬೇಕೆಂದು “ಬೆನ್ನಿಗೆ ಚೂರಿ ಹಾಕಿದ’ ಎಂದು ಪ್ರಚಾರ ಮಾಡಲಾಗಿತ್ತು. ಯಶವಂತಪುರದಲ್ಲಿ ಜವರಾಯಿಗೌಡರಿಗೆ ಅನುಕಂಪದ ಅಲೆ ಇದ್ದು ಈ ಬಾರಿ ಗೆದ್ದೇ ಗೆಲ್ಲುತ್ತಾರೆಂಬ ನಂಬಿಕೆ ಹೊಂದಿ ದ್ದರು. ಹೀಗಾಗಿ, ಜೆಡಿಎಸ್ ನಾಲ್ಕು ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ ಐದು ಸ್ಥಾನ ಗೆದ್ದರೆ ಬಿಜೆಪಿ ಸರ್ಕಾರ ಪತನಗೊಳ್ಳಲಿದೆ ಎಂಬ ಆಶಾ ಭಾವನೆ ಯಲ್ಲಿದ್ದ ಕುಮಾರಸ್ವಾಮಿ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದಾರೆ.
ಹುಣಸೂರಿನಲ್ಲಿ ಎಚ್.ವಿಶ್ವನಾಥ್ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿಲ್ಲ, ಜೆಡಿಎಸ್ ವರ್ಚಸ್ಸಿನಿಂದ ಗೆಲುವು ಸಾಧಿಸಿದ್ದು ಎಂದು ಹೇಳುತ್ತಿದ್ದ ಜೆಡಿಎಸ್‌ಗೆ ಅಲ್ಲೂ ಗೆಲುವು ಸಿಗದಿರುವುದು, ಚಿಕ್ಕ ಬಳ್ಳಾಪುರ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಡಿ.ಕೆ.ಶಿವಕು ಮಾರ್ “ಸಹಕಾರ’ ತತ್ವದಡಿ ಬೆಂಬಲ ದೊರೆತಿದ್ದರಿಂದ ಗೆಲುವಿನ ಆಸೆ ಹೊಂದ ಲಾಗಿತ್ತಾದರೂ ತೀವ್ರ ನಿರಾಸೆ ಮೂಡಿಸಿದೆ. ಗೋಕಾಕ್ ಕ್ಷೇತ್ರದಲ್ಲಿ ಅಶೋಕ್ ಪೂಜಾರಿ ಕಣಕ್ಕಿಳಿಸಿ ತ್ರಿಕೋನ ಸ್ಪರ್ಧೆಯಲ್ಲಿ ಗೆಲುವು ಸಿಗಬಹುದೆಂಬ ನಿರೀಕ್ಷೆ ಇರಿಸಿಕೊಂಡಿ ತ್ತಾದರೂ ಅದೂ ಹುಸಿಯಾಗಿದೆ. ಹೊಸಕೋಟೆಯಲ್ಲಿ ತಾವು ಬೆಂಬಲ ನೀಡಿದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆದ್ದರು ಎಂಬ ಸಮಾಧಾನ ಇದ್ದರೂ ಅಲ್ಲಿನ ಗೆಲುವು ಸಂಪೂರ್ಣ ವೈಯಕ್ತಿಕ ಪ್ರಭಾವದ್ದು ಎಂಬುದು ಗೊತ್ತಿರುವ ವಿಚಾರ.
15 ಕ್ಷೇತ್ರಗಳ ಪೈಕಿ ಯಶವಂತಪುರ, ಚಿಕ್ಕಬಳ್ಳಾಪುರ, ಮಹಾಲಕ್ಷ್ಮಿ ಲೇಔಟ್, ಹುಣಸೂರು, ಕೆ.ಆರ್.ಪೇಟೆ ಕ್ಷೇತ್ರಗಳಲ್ಲಿ ಮಾತ್ರ ಮತ ಗಳಿಕೆ ಪ್ರಮಾಣ ಇದ್ದು, ಬಹುತೇಕ ಕಡೆ ಠೇವಣಿ ಕಳೆದು ಕೊಂಡಿರುವುದು ಪಕ್ಷಕ್ಕೆ ಮುಜುಗರ ಅನುಭವಿಸುವಂತಾಗಿದೆ. ಎಚ್.ಡಿ.ದೇವೇಗೌಡ ಅಥವಾ ಎಚ್.ಡಿ.ಕುಮಾರಸ್ವಾಮಿಯವರ ಭಾವನಾತ್ಮಕ ಕಣ್ಣೀರು ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಇನ್ನಾದರೂ ಪಕ್ಷಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಸಮರ್ಥ ಹಾಗೂ ಪ್ರಬಲ ಅಭ್ಯರ್ಥಿಗಳನ್ನು ತಯಾರು ಮಾಡದಿದ್ದರೆ ಪಕ್ಷದ ಉಳಿವು ಕಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.
ಹೆಚ್ಚಿದ ಹೊಣೆಗಾರಿಕೆ: ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪಕ್ಷದ ಅಸ್ತಿತ್ವ ಕಾಪಾಡಿಕೊಳ್ಳಲು ಹೊಸ ಕಾರ್ಯತಂತ್ರ, ಕಾರ್ಯಕರ್ತರ ಪಡೆ ಕಟ್ಟುವ ಅನಿವಾರ್ಯತೆ ಜೆಡಿಎಸ್‌ಗಿದೆ. ಕುಟುಂಬಕ್ಕೆ ಸೀಮಿತವಾದ ಪಕ್ಷ ಎಂಬ ಹಣೆಪಟ್ಟಿ ಕಳಚಿಕೊಂಡು ಎಲ್ಲ ಸಮು ದಾಯ ಹಾಗೂ ನಾಯಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಪಕ್ಷ ಮುನ್ನಡೆಸುವ ಹೊಣೆಗಾರಿಕೆ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರ ಸ್ವಾಮಿಯವರ ಮೇಲಿದೆ. ಜತೆಗೆ, ಎರಡನೇ ಹಂತದ ನಾಯಕತ್ವ ಬೆಳೆಸದಿದ್ದರೆ ಕಷ್ಟ ಎಂಬುದು ಅರ್ಥ ಮಾಡಿಕೊಳ್ಳಬೇಕಿದೆ.
* ಎಸ್. ಲಕ್ಷ್ಮಿನಾರಾಯಣ