Advertisement

ಉದ್ಯೋಗಕ್ಕಾಗಿ ತಟ್ಟೆ ಬಾರಿಸಿ ಜೆಡಿಎಸ್‌ ವಿನೂತನ ಪ್ರತಿಭಟನೆ

05:36 PM Sep 11, 2020 | Suhan S |

ರಾಯಚೂರು: ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಆಳುವ ಸರ್ಕಾರಗಳು ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು, ಸುಳ್ಳಿನಿಂದಲೇ ಕೂಡಿದ ಪ್ರಧಾನಿಯ ಮನದ ಮಾತು ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಜೆಡಿಎಸ್‌ ಕಾರ್ಯಕರ್ತರು ಗುರುವಾರ ತಟ್ಟೆ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತಟ್ಟೆ ಬಾರಿಸುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಬಳಿಕ ಜಿಲ್ಲಾ ಧಿಕಾರಿ ಮೂಲಕ ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು. ದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದವರು ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡಿಕೊಳ್ಳುವ ಸ್ಥಿತಿ ಬಂದೊದಗಿದೆ. ಚುನಾವಣೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಇರುವ ಕೆಲಸಗಳನ್ನು ಕಸಿಯುತ್ತಿದೆ. ಅಷ್ಟೇ ಅಲ್ಲದೇ ಸರ್ಕಾರ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಇರುವ ಉದ್ಯೋಗಗಳನ್ನು ಕಳೆಯಲಾಗುತ್ತಿದೆ. ಈಗಾಗಲೇ ಬಿಎಸ್‌ಎನ್‌ಎಲ್‌ ಸಂಸ್ಥೆ ಮುಚ್ಚುವ ಸ್ಥಿತಿ ಬಂದಿದೆ. ದೇಶದ ಅತಿ ದೊಡ್ಡ ಸಂಸ್ಥೆಯಾದ ರೈಲ್ವೆ ಇಲಾಖೆ ಖಾಸಗೀಕರಣ ಮಾಡುವ ಮೂಲಕ ಉದ್ಯೋಗ ಕಸಿಯಲಾಗುತ್ತಿದೆ ಎಂದು ದೂರಿದರು.

ಪಕ್ಷದ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ಉಮೇಶ ಗೌಡ ಮಾತನಾಡಿ, ದೇಶದ ಜಿಡಿಪಿ ಪಾತಾಳ ಕಂಡಿದೆ. ಉತ್ತಮ ಆರ್ಥಿಕತೆ ಕಾಯ್ದುಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವಿಫಲವಾಗಿದ್ದಾರೆ.ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು. ಸ್ವಯಂ ಉದ್ಯೋಗಕ್ಕೆ ಸಾಲ ಮಂಜೂರುಮಾಡಬೇಕು. ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಕಾರ್ಯಾಧ್ಯಕ್ಷ ಎನ್‌.ಶಿವಶಂಕರ ವಕೀಲ, ಕಾರ್ಯಕರ್ತರಾದ ಪಿ.ಯಲ್ಲಪ್ಪ, ವಿಶ್ವನಾಥ ಪಟ್ಟಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next