ಮುದಗಲ್ಲ: ಜೆಡಿಎಸ್ ರೈತರ ಪಕ್ಷವಾಗಿದೆ. ಇಲ್ಲಿ ಸೇವಾಮನೋಭಾವನೆಯಿಂದ ರಾಜಕಾರಣ ಮಾಡಬೇಕೆ ವಿನಃ ಅಧಿ ಕಾರ, ಹಣಗಳಿಸುವ ಆಶೆಯಿಂದಲ್ಲ. ಇನ್ನೂ ನಾಲ್ಕೈದು ತಿಂಗಳಲ್ಲಿ ಪಕ್ಷ ಬಲಿಷ್ಠಗೊಳ್ಳಲಿದೆ. ಅದರ ಚಿತ್ರಣವೇ ಬದಲಾಗಲಿದೆ. ಅದಕ್ಕಾಗಿ ರಾಜ್ಯಾಧ್ಯಕ್ಷನಾಗಿ ರಾಜ್ಯಾದ್ಯಂತ ಸಂಚಾರ ಆರಂಭಿಸಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಬರುವ ಸಮಯದಲ್ಲಿ ಆಯಾ ರಾಮ ಗಯಾ ರಾಮ ಎನ್ನುವ ಹಾಗೆ ಬಿಜೆಪಿ, ಕಾಂಗ್ರೆಸ್‌ದಿಂದ ನಮ್ಮ ಪಕ್ಷಕ್ಕೆ ಬರುವವರನ್ನು ಕಾದು ನೋಡಿ. ನಾನು ಹಳೆಯ ರಾಜಕಾರಣಿ. ನನಗೂ ನನ್ನ ತಂಡವಿದೆ. ಪರಿಚಯದ ರಾಜಕಾರಣಿಗಳಿದ್ದಾರೆ. ಅವರೆಲ್ಲರನ್ನು ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡುತ್ತೇನೆ. ಕೊಪ್ಪಳ, ಬಾಗಲಕೋಟೆ, ರಾಯಚೂರು, ಮಾನ್ವಿ, ಸಿಂಧನೂರು ಸೇರಿದಂತೆ ವಿವಿಧೆಡೆ ನನ್ನ ತಂಡವಿದೆ. ಹೊಸಬರನ್ನು ಪಕ್ಷಕ್ಕೆ ತರಲಿದ್ದೇನೆ. ಜೆ.ಎಚ್. ಪಟೇಲರ ಮಗ, ವೀರೇಂದ್ರ ಪಾಟೀಲರ ಮಗ, ಅಲ್ಲಂ ಕರಿಬಸಪ್ಪ ಅವರ ಮಗ ಸೇರಿದಂತೆ ಸಜ್ಜನರನ್ನ, ಸಚ್ಛಾರಿತ್ರರನ್ನ, ಹೊಸಬರನ್ನ ಪಕ್ಷಕ್ಕೆ ಕರೆ ತರುವೆ. ಮೂರು ತಿಂಗಳಲ್ಲೇ ಪಕ್ಷದ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದರು.
ಕ್ಷೇತ್ರದಲ್ಲಿ ಇಬ್ಬರು ಜಿಪಂ ಸದಸ್ಯರು ಪಕ್ಷ ತೊರೆದಿದ್ದಾರೆ. ಮಸ್ಕಿ ಕ್ಷೇತ್ರದ ಪರಾಜಿ ಅಭ್ಯರ್ಥಿ ರಾಜಾ ಸೋಮನಾಥ ನಾಯ್ಕ, ಪುರಸಭೆ ಸದಸ್ಯರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಪಕ್ಷದ ಬಲವರ್ಧನೆ ಹೇಗೆ ಎಂದು ಕೇಳಿದಾಗ ಬರುವವರು ಬರಲಿ, ಹೋಗುವವರು ಹೋಗಲಿ. ಹೋಗುವವರು ಕೆಡಕು ಸ್ವಭಾವದವರು. ಬರುವವರು ಉತ್ತಮರು ಎಂದು ಹೇಳಿದರು.
ಈ ಸಮಯದಲ್ಲಿ ಪುರಸಭೆ ಸದಸ್ಯ ಅಮೀರಬೇಗ್ ಉಸ್ತಾದ, ಮುಖಂಡರಾದ ಸಿದ್ದು ವೈ. ಬಂಡಿ, ಮೌಲಾನಾ ಜಮೀರಹ್ಮದ ಖಾಜಿ, ಸೈ. ಯಾಸೀನ್ ಖಾದ್ರಿ, ಯಮನೂರ ನದಾಫ್, ಮುಲ್ಲಾ, ಮಹಿಬೂಬಸಾಬ ಕಡ್ಡಿಪುಡಿ, ನಾಗರಾಜ ತಳವಾರ ಇದ್ದರು.