Advertisement

ಜೆಡಿಎಸ್ ಪಕ್ಷದ ಬಗೆಗಿನ ಟೀಕೆಗೆ ಚುನಾವಣೆ ನಂತರ ಉತ್ತರ: ಎಚ್.ಡಿ. ದೇವೇಗೌಡ

04:09 PM Oct 08, 2020 | keerthan |

ಕಲಬುರಗಿ: ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಟೀಕೆ ಮಾಡುವವರಿಗೆ ಚುನಾವಣೆ ನಂತರ ಉತ್ತರ ನೀಡುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಗುಡುಗಿದರು.

Advertisement

ಈಶಾನ್ಯ ವಲಯ ಶಿಕ್ಷಕರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಳ್ಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಇನ್ನೊಬ್ಬರ ಆಧಾರದ ಮೇಲೆಯೇ ಸವಾರಿ ಮಾಡುತ್ತದೆ ಎಂಬಿತ್ಯಾದಿ ಟೀಕೆಗಳಿಗೆ ಚುನಾವಣೆ ನಂತರ ಉತ್ತರ ನೀಡಲಾಗುವುದು ಎಂದರು.

ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಎರಡೆರಡು ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ಪಕ್ಷ ಏಕಾಂಗಿಯಾಗಿ ಹೋರಾಡಲಿದೆ. ಪಕ್ಷದ ಕಾರ್ಯಕರ್ತರ ಬೆಂಬಲದೊಂದಿಗೆ ‌ಚುನಾವಣೆ ಎದುರಿಸಲಿದ್ದೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಪುನರುಚ್ಚರಸಿದರು.

ಇದನ್ನೂ ಓದಿ:ನಾನು ಆರ್ ಆರ್ ನಗರ ಕ್ಷೇತ್ರದ ಹೆಣ್ಣು ಮಗಳು, ನನಗೆ ರಾಜಕೀಯ ಹೊಸದಲ್ಲ: ಕುಸುಮಾ

ಯಾರು ಮಾತಾಡಿದರೂ ಕಿವಿಗೊಡುವುದಿಲ್ಲ. ಪಕ್ಷ ಸಂಘಟನೆ ಕಡೆ ಒತ್ತು ಕೊಡುತ್ತೇನೆ. ಮೋದಿ ತಪ್ಪು ಹುಡುಕುವುದೇ ಕೆಲಸವಲ್ಲ. ಆರ್ಥಿಕವಾಗಿ ದೇಶ ಸಂಕಷ್ಟಕ್ಕೆ ಗುರಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆದೋರಿದ ಸಮಸ್ಯೆಗಳೂ ಕಾರಣವಾಗಿದೆ. ಕೋವಿಡ್ ಸೋಂಕೂ ಕಾರಣವಾಗಿದೆ‌. ಬರೀ ಮೋದಿಯ ಬಗ್ಗೆ ತಪ್ಪು ಹುಡುಕೋದೇ ನನ್ನ ಕೆಲಸವಲ್ಲ. ಎಲ್ಲವನ್ನೂ ಗಮನಿಸುತ್ತಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಕಾಳಗ ನಡೆದಿದೆ. ಕೋವಿಡ್ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ. ಪಕ್ಷ ಸಂಘಟನೆ ಮಾಡುವುದೇ ನನ್ನ ಕೆಲಸ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ದೇವೇಗೌಡರು ಅಳುತ್ತಿದ್ದರು, ಈಗ ಕುಮಾರಸ್ವಾಮಿ ತಂದೆಯನ್ನು ಅನುಕರಿಸಿ ಅಳುತ್ತಿದ್ದಾರೆ ಎಂಬ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರ ಹೇಳಿಕೆ ಬಗ್ಗೆಯೂ ಮಾತಾಡೋಕೆ ಹೋಗುವುದಿಲ್ಲ.  ಅದರ ಅವಶ್ಯಕತೆಯೂ ಇಲ್ಲ. ನಮ್ಮ ಪಕ್ಷ ಯಾರು ಯಾರನ್ನು ಬೆಳೆಸಿದೆ ಎಲ್ಲರಿಗೂ ಗೊತ್ತಿದೆ.  ಯಾರ್ಯಾರು ಯಾವ ಪಕ್ಷ ಸೇರಿದರೂ ಅನ್ನುವುದೂ ಗೊತ್ತಿದೆ. ಚುನಾವಣಾ ಸಂದರ್ಭದಲ್ಲಿ ಏನೇನು ಮಾತನಾಡುತ್ತಿದ್ದಾರೆ ಅನ್ನೋದನ್ನೂ ಗಮನಿಸಿದ್ದೇನೆ. ನಾನು ನಿನ್ನೆ ರಾಜಕಾರಣಕ್ಕೆ ಬಂದಿಲ್ಲ. 1970ರಿಂದಲೂ ಈ ಭಾಗದಲ್ಲಿ ಪ್ರವಾಸ ಮಾಡಿದ್ದೇನೆ. ನನಗೆ ಪಕ್ಷ ಬೆಳೆಸುವುದಷ್ಟೇ ಮುಖ್ಯ ಎಂದು ವಿವರಿಸಿದರು.

ಜೆಡಿಎಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿದೆ. ಇವರೆಲ್ಲಾ ಹೊರಗೆ ಬಂದ್ರು. ಆದರೆ ನಾನು ಏಕಾಂಗಿಯಾಗಿ ಪಕ್ಷ ಮುನ್ನಡೆಸಿದ್ದೇನೆ. ನಾನು ಯಾರ ಹೆಗಲ ಮೇಲೂ ಕೈಯಿಟ್ಟು ಪಕ್ಷ ಮುನ್ನಡೆಸುತ್ತಿಲ್ಲ. ಇವತ್ತು ಜೆಡಿಎಸ್ ಶಕ್ತಿ ಕಡಿಮೆಯಾಗಿದೆ. ಆದರೆ ಕಾರ್ಯಕರ್ತರು ನಮ್ಮ ಜೊತೆಗಿದ್ದಾರೆ. ಪಕ್ಷ ಮುನ್ನಡೆಸೋದೇ ನಮ್ಮ ಗುರಿ ಎಂದು ಹೇಳಿದರು.

ಮತ್ತೊಂದು ‌ನ್ಯಾಯಮಂಡಳಿ ಅಗತ್ಯವಿಲ್ಲ: ಕೃಷ್ಣಾ ನದಿ ನೀರಿನ ‌ಹಂಚಿಕೆ ಸಂಬಂಧ ಮತ್ತೊಂದು ನ್ಯಾಯಮಂಡಳಿ ರಚಿಸುವ ಅಗತ್ಯವಿಲ್ಲ. ರಾಜ್ಯದ ಪಾಲಿನ ನೀರನ್ನು ಉಳಿಸಿಕೊಳ್ಳಲು ಕೊನೆಯವರೆಗೂ ಹೋರಾಟ ಮುಂದುವರೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕಲಬುರಗಿ ಜಿಲ್ಲಾ ಜೆಡಿಎಸ್ ಪಕ್ಷದಲ್ಲಿನ ಅಸಮಾಧಾನ ಶಮನವಾಗಲಿದೆ ಎಂದು ದೇವೇಗೌಡ ದೃಢ ವಿಶ್ವಾಸ ವ್ಯಕ್ತಪಡಿಸಿಸದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಬಂಡೆಪ್ಪ‌ ಕಾಶೆಂಪೂರ, ನಾಗನಗೌಡ ಕಂದಕೂರ, ಮುಖಂಡರಾದ ಬೋಜೇಗೌಡ, ಶ್ರೀಕಂಠೇಗೌಡ, ಜಿಲ್ಲಾ‌ ಅಧ್ಯಕ್ಷ ‌ಕೇದಾರಲಿಂಗಯ್ಯ ಹಿರೇಮಠ.‌ ಎಸ್. ಎಸ್ ಸಲಗರ, ಶಾಮರಾವ್ ಸೀರನ್ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next