Advertisement

ರಾಹುಲ್‌-ಗೌಡರ ನಡುವೆಯೇ ಮಾತುಕತೆಗೆ ಜೆಡಿಎಸ್‌ ಪಟ್ಟು

12:30 AM Feb 20, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕುರಿತ ಮಾತುಕತೆ ಮಾಜಿ ಪ್ರಧಾನಿ ದೇವೇ ಗೌಡ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನಡುವೆಯೇ ನಡೆಯ ಬೇಕು ಎಂದು ಜೆಡಿಎಸ್‌ ಪಟ್ಟು ಹಿಡಿ ದಿದೆ. 28 ಕ್ಷೇತ್ರಗಳ ಪೈಕಿ 4ರಿಂದ 5 ಕ್ಷೇತ್ರಗಳನ್ನು ಮಾತ್ರ ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ನ ರಾಜ್ಯ ನಾಯಕರು ತೆರೆ ಮರೆಯ ಕಾರ್ಯ ತಂತ್ರ ರೂಪಿಸಿ ರುವುದು ಬಿಕ್ಕಟ್ಟಿಗೆ ಕಾರಣ ವಾಗಿದೆ.

Advertisement

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೆಪಿ ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಜತೆ ಇತ್ತೀಚೆಗೆ ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದಾಗ ಮಂಡ್ಯ, ಹಾಸನ, ಶಿವಮೊಗ್ಗ ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಮಾತ್ರ ಜೆಡಿಎಸ್‌ಗೆ 
ಬಿಟ್ಟುಕೊಡಬಹುದು ಎಂದಿದ್ದರು. ತವರು ಕ್ಷೇತ್ರ ಮೈಸೂರನ್ನು ಬಿಟ್ಟು ಕೊಡಲು ಒಲ್ಲದ ಸಿದ್ದರಾಮಯ್ಯ ಮೈಸೂರು ಸೇರಿ 8 ಕ್ಷೇತ್ರ ಬಿಟ್ಟುಕೊಟ್ಟರೆ ಪಕ್ಷಕ್ಕೆ ಭವಿಷ್ಯ ಇಲ್ಲದಂತಾಗುತ್ತದೆ, ಸ್ಥಳೀಯ ಮಟ್ಟದಲ್ಲೂ ನಾಯಕರ ವಿರೋಧ ವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಬಂದಿದ್ದಾರೆ ಎನ್ನಲಾಗಿದೆ.

ಇದರಿಂದ ದೇವೇಗೌಡರು ತೀವ್ರ ಅಸಮಾಧಾನಗೊಂಡಿದ್ದು, ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ರಾಜ್ಯ ನಾಯಕರ ಜತೆ ಮಾತುಕತೆ ನಡೆದರೆ ಪ್ರಯೋಜನವಾಗದು. ಇಲ್ಲಿನವರು ಜೆಡಿಎಸ್‌ ಅನ್ನು ಕಟ್ಟಿಹಾಕಬಹುದು ಎಂಬ ಅಭಿಪ್ರಾಯಪಟ್ಟಿದ್ದಾರೆ. ಇದು ಜೆಡಿಎಸ್‌ ನಾಯಕರಲ್ಲಿ ಆಕ್ರೋಶಕ್ಕೆ ಕಾರಣ ವಾಗಿದ್ದು, ಎಂಟ ರಿಂದ 10 ಕ್ಷೇತ್ರದ ಬೇಡಿಕೆಯೊಂದಿಗೆ ರಾಹುಲ್‌ ಜತೆಗೇ ಚರ್ಚಿಸುವಂತೆ ದೇವೇ ಗೌಡರ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ಸಮ್ಮಿಶ್ರ ಸರಕಾರ ರಚನೆ ಮಾತುಕತೆ ನಡೆದದ್ದು ದೇವೇಗೌಡರು ಮತ್ತು ರಾಹುಲ್‌ ಗಾಂಧಿ ನಡುವೆ. ಸೀಟು ಹೊಂದಾ ಣಿಕೆಯೂ ಅವರಿಬ್ಬರ ನಡುವೆಯೇ ಆಗಬೇಕು. ಸಿದ್ದ ರಾಮಯ್ಯ, ದಿನೇಶ್‌ ಗುಂಡೂರಾವ್‌ ಸಹಿತ ರಾಜ್ಯ ನಾಯಕರ ಜತೆ ಮಾತುಕತೆ ನಡೆದರೆ ಜೆಡಿಎಸ್‌ ಅನ್ನು 4 ಸೀಟುಗಳಿಗೆ ಸೀಮಿತಗೊಳಿಸಬಹುದು ಎಂಬ ಆತಂಕ ಜೆಡಿಎಸ್‌ ನಾಯಕರದ್ದು.

ಕಾಂಗ್ರೆಸ್‌ ಜತೆ ಮೈತ್ರಿಯಾಗದಿದ್ದರೂ ಹಾಸನ, ಮಂಡ್ಯ, ಮೈಸೂರುಗಳಲ್ಲಿ ಗೆಲ್ಲುವ ಅವಕಾಶ
ವಿದೆ. ಈ ಬಾರಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರುಗಳಲ್ಲೂ ಪಕ್ಷದ ಪರ ಒಳ್ಳೆಯ ವಾತಾವರಣವಿದೆ. ಬೆಂಗಳೂರು ಉತ್ತರ ಹಾಗೂ ಶಿವಮೊಗ್ಗದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್‌ ನೆರವು ಅಗತ್ಯ. ಆದರೆ ಚಿತ್ರದುರ್ಗ, ದಾವಣಗೆರೆ, ವಿಜಯಪುರ, ಬೀದರ್‌, ಬೆಳಗಾವಿ, ಹಾವೇರಿ, ಬಳ್ಳಾರಿ, ರಾಯಚೂರು, ಕಲಬುರಗಿ, ಕೊಪ್ಪಳ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ನಿಂದ ಅನುಕೂಲವಾಗಲಿದೆ. ಹೀಗಾಗಿ ತನಗೆ ನೆಲೆ ಇರುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಕ್ಷೇತ್ರಗಳ ಪೈಕಿ ಎರಡು ಬಿಟ್ಟುಕೊಡಬೇಕು. ಇಲ್ಲಿ ತ್ಯಾಗ ಮಾಡಿದರೆ ಬೇರೆ ಕಡೆ ಲಾಭ ಆಗಲಿದೆ ಎಂಬುದು ಜೆಡಿಎಸ್‌ನ ವಾದ. ಆದರೆ ಕಾಂಗ್ರೆಸ್‌ ನಾಯಕರು ತಾವು ಗೆದ್ದಿರುವ ಕ್ಷೇತ್ರ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಆಪರೇಷನ್‌ ಕಮಲ ಕಾರ್ಯಾಚರಣೆ ವಿರುದ್ಧ ಒಂದಾಗಿ ಕಸರತ್ತು ನಡೆಸಿದ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸೀಟು ಹೊಂದಾಣಿಕೆ ವಿಚಾರದಲ್ಲಿ “ಸಂಘರ್ಷ’ ಉಂಟಾಗುವ ಲಕ್ಷಣಗಳು ಕಂಡುಬರುತ್ತಿವೆ.
 

Advertisement

ಲೋಕಸಭೆ ಸೀಟು ಹೊಂದಾಣಿಕೆ ಎರಡೂ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರ ನಡುವೆ ಆದರೆ ಸೂಕ್ತ. ಯಾರ ಶಕ್ತಿ ಎಷ್ಟು ಎಂಬುದು ಜನರಿಗೆ ಗೊತ್ತಿದೆ. ಎಲ್ಲೋ ಕುಳಿತು, ಯಾವುದೋ ಲೆಕ್ಕಾಚಾರದಲ್ಲಿ  ಸಾಮರ್ಥ್ಯ ಅಳೆಯುವುದು ಸೂಕ್ತವಲ್ಲ.
– ಎಚ್‌. ವಿಶ್ವನಾಥ್‌
ಜೆಡಿಎಸ್‌ ರಾಜ್ಯಾಧ್ಯಕ್ಷ

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next