Advertisement

ಶರತ್‌ ಬಚ್ಚೇಗೌಡಗೆ ಜೆಡಿಎಸ್‌ ಬೆಂಬಲ : ಕೈ -ಕಮಲಕ್ಕೆ ಶಾಕ್‌ ನೀಡಿದ ತೆನೆ ಹೊತ್ತ ಮಹಿಳೆ

12:10 PM Nov 14, 2019 | sudhir |

ಬೆಂಗಳೂರು: ಉಪ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಹೊಸಕೋಟೆ ಕ್ಷೇತ್ರದಲ್ಲಿ ಸಂಸದ ಬಿ.ಎನ್‌.ಬಚ್ಚೇಗೌಡರ ಪುತ್ರ ಶರತ್‌ ಬಚ್ಚೇಗೌಡರಿಗೆ ಜೆಡಿಎಸ್‌ ಬೆಂಬಲ ಘೋಷಿಸಿದ್ದು, ಹದಿನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದೆ.

Advertisement

ಶರತ್‌ ಬಚ್ಚೇಗೌಡರು ನಮ್ಮ ಮನೆಯವರೇ. ಮುಂದೆ ಅವರು ಮತ್ತೆ ಮನೆಗೆ ಬರಲೂ ಬರಬಹುದು ಎಂದು ಕುಮಾರಸ್ವಾಮಿ ಹೇಳಿದ್ದು ಈ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಜೆಡಿಎಸ್‌ ಶಾಕ್‌ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಲಿ ಎಂಬ ಸಿದ್ದರಾಮಯ್ಯ ಸವಾಲು ಸ್ವೀಕರಿಸಲು ಸಿದ್ಧ. ಹದಿನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಿ ಕಾಂಗ್ರೆಸ್‌ ಹಾಗೂ ಬಿಜೆಪಿಗಿಂತ ಎರಡು ಪಟ್ಟು ಹೆಚ್ಚು ಶ್ರಮ ಹಾಕುತ್ತೇನೆ ಎಂದು ಹೇಳಿದರು.

ಈ ಉಪ ಚುನಾವಣೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳಿಗೂ ಅಗ್ನಿ ಪರೀಕ್ಷೆಯಾಗಿದೆ. ಫ‌ಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳೂ ಆಗಲಿವೆ ಎಂದು ತಿಳಿಸಿದರು.

ಕಾಂಗ್ರೆಸ್‌ ಹಾಗೂ ಬಿಜೆಪಿ ಜತೆ ಯಾವ ಒಳ ಅಥವಾ ಹೊರ ಒಪ್ಪಂದ ಇಲ್ಲ. ನಾನು ಮಾಡಿಕೊಳ್ಳುವುದಿದ್ದರೆ ಓಪನ್‌ ಒಪ್ಪಂದ ಮಾಡಿಕೊಳ್ಳುತ್ತೇನೆ. ಹೋರಾಟ ಮಾಡುವುದಾದರೆ ನೇರವಾಗಿಯೇ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಯಾವ ಸಾಧನೆ ಮಾಡಿದೆ ಎಂದು ನಾನು ಒಪ್ಪಂದ ಮಾಡಿಕೊಳ್ಳಲಿ.

Advertisement

ಇವರು ಪ್ರವಾಹ ಸಂತ್ರಸ್ತ ಪ್ರದೇಶಗಳಲ್ಲಿ ಮಾಡಿರುವ ಘನ ಕಾರ್ಯ ನೋಡಿಲ್ಲವೇ? ಅಲ್ಲಿ ಏನಾನಾಗಿದೆ, ಎಷ್ಟು ಮಾತ್ರ ಪರಿಹಾರ ಸಿಕ್ಕಿದೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಸುಪ್ರೀಂಕೋರ್ಟ್‌ ತೀರ್ಪು ಬರಲಿ ಎಂದು ನಾವು ಕಾಯುತ್ತಿದ್ದೆವು.ದೇವೇಗೌಡರ ಮಾರ್ಗದರ್ಶನದಲ್ಲಿ ಉಪ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದೇವೆ. ಹೊಸಕೋಟೆಯಲ್ಲಿ ಶರತ್‌ ಬಚ್ಚೇಗೌಡರಿಗೆ ಬೆಂಬಲ ನೀಡಲು ತೀರ್ಮಾನಿಸಲಾಗಿದೆ. ಹದಿನಾಲ್ಕು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತೇವೆ. ನಾಳೆ ಮಧ್ಯಾಹ್ನದೊಳಗೆ ಅಭ್ಯರ್ಥಿಗಳು ಫೈನಲ್‌ ಆಗಲಿದ್ದಾರೆ ಎಂದು ಹೇಳಿದರು.

ಸಿದ್ದು ವಿರುದ್ಧ ವಾಗ್ಧಾಳಿ
ಆರ್ಥಿಕ ತಜ್ಞರಾಗಿರುವ ಸಿದ್ದರಾಮಯ್ಯ ಅವರು ತಾನೇನೋ ಸಾಧನೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅವರ ಕಾಲದಲ್ಲಿ ರೂಪಿಸಿದ ವಸತಿ ಯೋಜನೆಗಳಿಗೆ ಮುಂದಿನ ಹತ್ತು ವರ್ಷ ಆಡಳಿತ ನಡೆಸೋರು 28 ಸಾವಿರ ಕೋಟಿ ರೂ. ಹಣ ಕೊಡಬೇಕಾಗಿದೆ. ನೀರಾವರಿ ಯೋಜನೆಗಳಿಗೆ 1.3 ಲಕ್ಷ ಕೋಟಿ ಎಂದು ಘೋಷಿಸಿದ್ದಾರೆ. ಎಷ್ಟು ಹಣ ಇಟ್ಟಿದ್ದರು ಎಂಬುದನ್ನು ಹೇಳಬೇಕು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿ ಇದ್ದಿದ್ದರೆ ರಾಜು ಕಾಗೆ ಅವರನ್ನು ಯಾಕೆ ಸೇರಿಸಿಕೊಳ್ಳುತ್ತಿದ್ದರು. ಜೆಡಿಎಸ್‌ಗೆ ಶಕ್ತಿ ಇಲ್ಲ ಎಂದಾದರೆ ನಮ್ಮ ಪಕ್ಷದ ನಾಯಕರ ಮನೆ ಬಾಗಿಲು ಯಾಕೆ ಬಡಿಯುತ್ತಿದ್ದಾರೆ. ನನಗೆ ಎಲ್ಲ ಪಕ್ಷಗಳ ಹಣೆಬರಹ ಗೊತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರೇ ಜೆಡಿಎಸ್‌ ಪಕ್ಷದ ಮೇಲೆ ಅಪನಂಬಿಕೆ ಬರುವ ರೀತಿ ಮಾತನಾಡಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. 2008 ರಲ್ಲಿ ಇದೇ ರೀತಿ ಆಪರೇಷನ್‌ ಕಮಲ ಆಗಿ ಉಪ ಚುನಾವಣೆ ನಡೆದಾಗ ಜೆಡಿಎಸ್‌ ಆರು ಕ್ಷೇತ್ರಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್‌ ಒಂದೆ ಒಂದು ಕ್ಷೇತ್ರದಲ್ಲಿ ಗೋವಿಂದರಾಜನಗರದಲ್ಲಿ ಜೆಡಿಎಸ್‌ ಬೆಂಬಲದಿಂದ ಗೆದ್ದಿತ್ತು ಎಂಬುದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ ಎಂದು ತಿಳಿಸಿದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 75 ರಿಂದ 80 ಸ್ಥಾನಕ್ಕೆ ನಿಲ್ಲುತ್ತಿತ್ತು. ಸಿದ್ದರಾಮಯ್ಯ ಅವರು ಜೆಡಿಎಸ್‌ ಬಗ್ಗೆ ಮಾತನಾಡಿದ್ದರಿಂದ ಬಿಜೆಪಿ 105 ಸ್ಥಾನ ಗಳಿಸಿತು. ಸಿದ್ದರಾಮಯ್ಯ ಅವರೇ ಬಿಜೆಪಿಗೆ ಶಕ್ತಿ ತುಂಬುತ್ತಿದ್ದಾರೆ ಎಂದು ನೇರವಾಗಿಯೇ ನಾನು ಹೇಳುತ್ತೇನೆ ಎಂದರು.
ನಮ್ಮ ಪಕ್ಷದಿಂದ ಮತ್ತೂಂದು ವಿಕೆಟ್‌ ಹೋಗುತ್ತೆ. ಜಿ.ಟಿ.ದೇವೇಗೌಡರು ಹೋಗೇ ಬಿಟ್ಟರು, ಶಾಕ್‌ ಎಂದೆಲ್ಲಾ ಟಿವಿಗಳಲ್ಲಿ ಬರುತ್ತಿದೆ. ಆದರೆ, ಅಲ್ಲಿ ಫ್ಯೂಸ್‌ ಹೋಗಿದೆ, ಇನ್ನೆಲ್ಲಿ ಕರೆಂಟ್‌ ಬರುತ್ತೆ ಎಂದು ಲೇವಡಿ ಮಾಡಿದರು.

ಇನ್ನು ಆ ಪುಟ್ಟಣ್ಣ ಎರಡೂವರೆ ವರ್ಷದ ಹಿಂದೆಯೇ ಟೋಪಿ ಹಾಕಿ ಹೋಗಿರುವ ಗಿರಾಕಿ. ಆತನನ್ನು ಕಟ್ಟಿಕೊಂಡು ನಾನೇನು ಮಾಡಲಿ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಇನ್ನೂ ಇದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಬಸವರಾಜ ಹೊರಟ್ಟಿ, ವಿಧಾನಪರಿಷತ್‌ ಸದಸ್ಯರಾದ ಕಾಂತರಾಜ್‌, ತೂಪಲ್ಲಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next