Advertisement

ಅಡ್ಡಮತದಾನ: ತೀರ್ಪು ಕಾಯ್ದಿರಿಸಿದ ಸ್ಪೀಕರ್‌

06:00 AM Mar 20, 2018 | Team Udayavani |

ಬೆಂಗಳೂರು:ಜೆಡಿಎಸ್‌ ಬಂಡಾಯ ಶಾಸಕರು ಅಡ್ಡ ಮತದಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್‌ ಕೆ.ಬಿ.ಕೋಳಿವಾಡ ತೀರ್ಪು ಕಾಯ್ದಿರಿಸಿದ್ದಾರೆ.

Advertisement

ಸೋಮವಾರ ಪ್ರಕರಣದ ಮರು ವಿಚಾರಣೆ ನಡೆಸಿದ ಅವರು ಪರ-ವಿರೋಧ ವಾದ ಆಲಿಸಿ ತೀರ್ಪು ಕಾಯ್ದಿರಿಸಿದರು.
ಇದಕ್ಕೂ ಮುನ್ನ ನಡೆದ ವಿಚಾರಣೆ ಸಂದರ್ಭದಲ್ಲಿ ಅಡ್ಡ ಮತದಾನ ಮಾಡಿರುವ ಏಳು ಶಾಸಕರನ್ನು ಅನರ್ಹ ಮಾಡುವಂತೆ ಜೆಡಿಎಸ್‌ ಶಾಸಕ ಬಿ.ಬಿ.ನಿಂಗಯ್ಯ ಸ್ಪೀಕರ್‌ಗೆ ಮನವಿ ಮಾಡಿದರು.

ಕಳೆದ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಎಚ್‌.ಡಿ.ರೇವಣ್ಣ ಅವರು ಮತಗಟ್ಟೆಯಲ್ಲಿ  ಏಜೆಂಟಾಗಿದ್ದರು. ಆ ಸಂದರ್ಭದಲ್ಲಿ ಅವರಿಗೆ ತೋರಿಸಿಯೇ ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದೇವೆ ಎಂದು ಅಡ್ಡ ಮತದಾನ ಮಾಡಿದ್ದಾರೆ.  ಈ ಮೂಲಕ ಪಕ್ಷ ವಿರೋಧಿ ಚಟುವಟಿಕೆ  ಮಾಡಿದ್ದಾರೆ. ನಂತರದ ದಿನಗಳಲ್ಲಿ ರಾಹುಲ್‌ಗಾಂಧಿ ಸೇರಿದಂತೆ ಸಾಕಷ್ಟು ಕಾಂಗ್ರೆಸ್‌ ಮುಖಂಡರ ಜತೆ ಗುರುತಿಸಿಕೊಂಡಿದ್ದಾರೆ. ನಮ್ಮ ಪಕ್ಷದ ಚಿನ್ಹೆ ಮೇಲೆ ಗೆದ್ದು ಬಂದು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಹೀಗಾಗಿ, ಇವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಕೋರಿದರು.

ಆದರೆ, ಬಂಡಾಯ ಶಾಸಕರ ಪರ ವಕೀಲರು, ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರ ತೀರ್ಪು ಪ್ರಕಾರ ಅಧಿವೇಶನದ ಸಂದರ್ಭದಲ್ಲಿ ವಿಪ್‌ ಜಾರಿಯಾದರೆ ಮಾತ್ರ ಅದು ಶಾಸಕರು ಪಾಲಿಸಬೇಕು. ಅಧಿವೇಶನ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಪಕ್ಷವು ಶಾಸಕರು ತಮ್ಮ ಇಷ್ಟದಂತೆ ನಡೆಸಿಕೊಳ್ಳುವಂತಿಲ್ಲ.  ಹೀಗಾಗಿ, ರಾಜ್ಯಸಭೆ ಚುನಾವಣೆ ವೇಳೆ ಜಾರಿ ಮಾಡಿರುವ ವಿಪ್‌ಗೆ ಮಾನ್ಯತೆ ಇಲ್ಲ ಎಂದು ವಾದ ಮಂಡಿಸಿದರು.

ಜತೆಗೆ ಏಳು ಜನರಿಗೆ ಅನ್ವಯವಾಗುವ ತೀರ್ಪು ಶಾಸಕ ಗೋಪಾಲಯ್ಯ ಅವರಿಗೂ ಅನ್ವಯವಾಗಬೇಕು. ಅವರ ಸದಸ್ಯತ್ವ ಅನರ್ಹತೆಗೆ ಜೆಡಿಎಸ್‌ ಯಾಕೆ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು.

Advertisement

ವಿಚಾರಣೆ ಹಿನ್ನೆಲೆಯಲ್ಲಿ ಏಳು ಬಂಡಾಯ ಶಾಸಕರು ವಕೀಲರ ಜತೆ ಸ್ಪೀಕರ್‌ ಮುಂದೆ ಹಾಜರಾಗಿದ್ದರು. ಜೆಡಿಎಸ್‌ ಪಕ್ಷದ ಪರ ಬಿ.ಬಿ.ನಿಂಗಯ್ಯ, ಸಿ.ಎನ್‌.ಬಾಲಕೃಷ್ಣ ವಕೀಲರ ಜತೆ ಹಾಜರಾಗಿದ್ದರು.

ಎ.ಎಸ್‌.ನಡಹಳ್ಳಿ ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರಿದ್ದಾರೆ. ಹಾಗಂತ ಕಾಂಗ್ರೆಸ್‌ನವರು ಜೆಡಿಎಸ್‌ ತರಹ ಕಾಟ ಕೊಡುತ್ತಿಲ್ಲ. ನಮ್ಮ ವಿಚಾರದಲ್ಲಿ ಇನ್ನೂ ತೀರ್ಪು ಬಂದಿಲ್ಲ. ತೀರ್ಪು ಬಂದ ಮೇಲೆ ಮುಂದಿನ ನಡೆ. ರಾಜ್ಯಸಭೆ ಚುನಾವಣೆಯಲ್ಲಿ ನಾವು ಮತದಾನ ಮಾಡಬಾರದು ಎಂದು ನಮ್ಮ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ.
– ಚೆಲುವರಾಯಸ್ವಾಮಿ, ಬಂಡಾಯ ಶಾಸಕ

ನಾವು ದೇವೇಗೌಡರ ವಿರುದ್ಧವೇ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದೆವು. ದೇವೇಗೌಡರು ಎಂದಿಗೂ ನಮ್ಮ ನಾಯಕರೇ.  ಅವರು ಪ್ರಶ್ನಾತೀತ ನಾಯಕ. ಏಳು ಶಾಸಕರ ವಿರುದ್ಧ ಅವರು ಹೋರಾಟ ಮಾಡುವುದಾದರೆ ಮಾಡಲಿ. ತೀರ್ಮಾನ ಜನರಿಗೆ ಬಿಟ್ಟದ್ದು. ಒಳ್ಳೆಯದು-ಕೆಟ್ಟದ್ದು ದೇವರಿಗೆ ಬಿಟ್ಟದ್ದು.
– ಜಮೀರ್‌ ಆಹಮದ್‌, ಬಂಡಾಯ ಶಾಸಕ

ನ್ಯಾಯಾಧೀಶರನ್ನು ಯಾವಾಗ ತೀರ್ಪು ಕೊಡುತ್ತೀರಿ ಎಂದು ಕೇಳಲು ಸಾಧ್ಯವೇ? ನಾನು ಇಲ್ಲಿ ಜಡ್ಜ್. ನೀವು ಪ್ರಶ್ನೆ ಮಾಡುವಂತಿಲ್ಲ. ತೀರ್ಪು ಯಾವಾಗ ಎಂದು ಕೇಳಿದ ಪತ್ರಕರ್ತರನ್ನು ಸ್ಪೀಕರ್‌ ಕೆ.ಬಿ.ಕೋಳಿವಾಡ ಪ್ರಶ್ನಿಸಿದ್ದು ಹೀಗೆ. ವಾದ ವಿವಾದ ಆಲಿಸಿದ್ದೇನೆ. ತೀರ್ಪು ಕಾಯ್ದಿರಿಸಿದ್ದೇನೆ. ಹೈಕೋರ್ಟ್‌ಗೆ ಹೋಗಲು ಎಲ್ಲರಿಗೂ ಹಕ್ಕಿದೆ. ನಾನು ತೀರ್ಪು ನಾಳೆನೂ ಕೊಡಬಹುದು. ಮತದಾನಕ್ಕೂ ಇದಕ್ಕೂ ಸಂಬಂಧವಿಲ್ಲ.
– ಕೆ.ಬಿ.ಕೋಳಿವಾಡ, ಸ್ಪೀಕರ್‌

Advertisement

Udayavani is now on Telegram. Click here to join our channel and stay updated with the latest news.

Next