Advertisement
ಬೆಲೆಗಳ ಏರಿಕೆ ವಿರೋಧಿಸಿ ಫ್ರೀಡಂ ಪಾರ್ಕಿನಲ್ಲಿ ಬೆಂಗಳೂರು ಮಹಾನಗರ ಜಾತ್ಯತೀತ ಜನತಾದಳ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನ ಸಭೆ ಉದ್ದೇಶಿಸಿ ಮಾತನಾಡಿ, ಬೆಲೆ ಏರಿಕೆ ವಿರುದ್ಧ ಪ್ರತಿಭಟನಾ ಮೆರವಣಿಗೆ ಮಾಡಲು ಅವಕಾಶ ಕೊಡದ ರಾಜ್ಯ ಸರ್ಕಾರ, ಶೋಭಾಯಾತ್ರೆಗೆ ಅವಕಾಶ ನೀಡಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ, ಇದರ ಬಗ್ಗೆ ತುಟಿ ಬಿಚ್ಚದ ಮುಖ್ಯಮಂತ್ರಿಗಳು ಧರ್ಮಗಳ ನಡುವೆ ಯುದ್ಧಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಕೇಂದ್ರದಿಂದ ಬಿಸಿ, ರಾಜ್ಯದಿಂದ ಶಾಕ್
ಕೇಂದ್ರ ಸರಕಾರವು ನಿರಂತರವಾಗಿ ತೈಲ ಬೆಲೆ ಏರಿಕೆ ಮಾಡುತ್ತಿರುವುದರಿಂದ ಜನರಿಗೆ ಬಿಸಿ ಮೇಲೆ ಬಿಸಿ ಮುಟ್ಟಿಸುತ್ತಿದೆ. ಇನ್ನು ರಾಜ್ಯ ಸರಕಾರ ಈಗ ವಿದ್ಯುತ್ ದರ ಏರಿಸುವ ಮೂಲಕ ಶಾಕ್ ನೀಡಿದೆ. ಈಗ ಹಾಲಿನ ಬೆಲೆ ಏರಿಸಲು ಹೊರಟಿದೆ. ಈ ಬೆಲೆ ಏರಿಕೆಯ ಫಲ ರೈತರಿಗೆ ಸಿಗುತ್ತದೆಯೋ ಎಂದು ಪ್ರಶ್ನಿಸಿದರು.
ಬೆಲೆ ಏರಿಕೆಯ ಬಗ್ಗೆ ಜನರಲ್ಲಿ ತೀವ್ರ ವ್ಯಕ್ತವಾಗುತ್ತಿದೆ. ಅದನ್ನು ವಿಷಯಾಂತರ ಮಾಡಿ ಧರ್ಮದ ವಿಚಾರದಲ್ಲಿ ಗಲಾಟೆ ಸೃಷ್ಟಿ ಮಾಡಲಾಗುತ್ತಿದೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೊಟಕ್ಕೆ ಬೆಂಕಿ ಹಾಕುತ್ತಾ ಇದ್ದಾರೆ. ಹಿಜಾಬ್ ವಿಚಾರ ಸಣ್ಣದಾಗಿದ್ದಾಗಲೇ ಚಿವುಟಿ ಹಾಕಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದರು.
ಅಲ್ ಖೈದಾ ಮುಖಂಡನ ವಿಡಿಯೋ ಬಂದ ಮೇಲೆ ಈಗ ಮುಖ್ಯಮಂತ್ರಿ ತನಿಖೆಗೆ ಆದೇಶ ಮಾಡಿದ್ದಾರೆ. ಆರಂಭದಲ್ಲೇ ಹಿಜಾಬ್ ವಿಚಾರವಾಗಿ ಸರಿಯಾದ ಕ್ರಮ ವಹಿಸಿದ್ದಿದ್ದರೆ ಈಗ ಹೀಗೆ ಆಗುತ್ತಿತ್ತಾ? ಡಾ.ಮನಮೋಹನ್ ಸಿಂಗ್ ಅವರನ್ನು ಮಾತೆತ್ತಿದರೆ ಮೌನಿ ಪ್ರಧಾನಿ ಅಂತೆಲ್ಲ ಟೀಕೆ ಮಾಡುತ್ತಿದ್ದ ಬಿಜೆಪಿ ಈಗ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಹಾಗಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಯಾಕೆ ಮೌನಿ ಆಗಿದ್ದಾರೆ? ಹಾಗಾದರೆ ಅವರನ್ನು ಮೌನಿ ಮುಖ್ಯಮಂತ್ರಿ ಎಂದು ಕರೆಯಬೇಕು ಎಂದರು.
ಪೊಲೀಸ್ ಇಲಾಖೆಗೆ ಎಚ್ಚರಿಕೆ
ಸರಕಾರದ ವಿರುದ್ಧ ಮಾತಾಡಿದವರಿಗೆ ಗಡಿಪಾರು ಮಾಡುವ ಅಥವಾ ದೇಶ ದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಿ ಕೇಸ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯು ಬೆಂಬಲ ಕೊಡುತ್ತಿದೆ ಎಂದು ಆರೋಪ ಮಾಡಿದರು.
ಸದಾ ಕಾಲ ಬಿಜೆಪಿ ಸರಕಾರ ಇರಲು ಸಾಧ್ಯವಿಲ್ಲ. ಹಾಗಾಗಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ಕೊಡುತ್ತೇನೆ. ಕಳೆದ ವರ್ಷಗಳಲ್ಲಿ ಏನಾಯಿತು? ಎರಡು ರಾಷ್ಟ್ರೀಯ ಪಕ್ಷಗಳು ಯಾರ ಮನೆ ಬಾಗಿಲಿಗೆ ಬಂದವು ಅಂತ ಗೊತ್ತಿದೆ. ಪೊಲೀಸರಿಗೆ ಸಂಬಳ ಕೊಡುತ್ತಾ ಇರುವುದು ಶಾಸಕರು, ಮಂತ್ರಿಗಳು ಅಲ್ಲ. ರಾಜ್ಯದ ಜನರ ತೆರಿಗೆ ಹಣದಿಂದ ನಿಮಗೆ ಸಂಬಳ ಕೊಡುತ್ತಿರುವುದು ಅನ್ನುವುದು ನೆನಪಿರಲಿ ಎಂದು ಕಟುವಾದ ಎಚ್ಚರಿಕೆ ನೀಡಿದರು.
ಹಿಂದೂ ಸಂಘಟನೆಗಳಿಗೆ ಸವಾಲು
ಯಾವ ವಿಶ್ವ ಹಿಂದೂ ಪರಿಷತ್, ಯಾವ ಬಜರಂಗದಳ, ಯಾವ ಆರೆಸ್ಸೆಸ್, ನಿಮಗೆ ಯೋಗ್ಯತೆ ಇದ್ದರೆ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡಿ. ಅದು ಬಿಟ್ಟು ಹಲಾಲ್, ಜಟ್ಕಾ ಇಂತಾ ವಿಚಾರಗಳಲ್ಲಿ ಹೋರಾಡುತ್ತೀರಾ? ರೈತರು ಬೆಳೆಯುವ ಬೆಳೆಯನ್ನು ಖರೀದಿ ಮಾಡುತ್ತೀರಾ? ಬೀದಿ ಬದಿ ವ್ಯಾಪಾರಿಗಳ ಪರಿಸ್ಥಿತಿ ಏನಾಗಿದೆ ಈ ಸರ್ಕಾರ ಅವರ ಬಗ್ಗೆ ಏನಾದರೂ ಯೋಚನೆ ಮಾಡಿದೆಯಾ. ತಿನ್ನುವ ವಿಚಾರದಲ್ಲಿ ಧರ್ಮ ಬೆರೆಸಿರುವ ಈ ನೀತಿಗೆಟ್ಟ ಸರ್ಕಾರದ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದರು.
ಜನರ ಕಷ್ಟ ಸುಖಕ್ಕೆ ದನಿ ಎತ್ತುತ್ತಿರುವವರು ನಾವು. ನಮ್ಮ ಪಕ್ಷ. ಆ ಸಂಕಷ್ಟ ಸಮಯದಲ್ಲಿ ಕೊರೊನಾದಿಂದ ಸಾವಿರಾರು ಕುಟುಂಬ ಬೀದಿ ಪಾಲಾಗಿವೆ. ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಈಗ ಬೆಲೆ ಏರಿಕೆಯಿಂದ ಜನ ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ಹೇಳುತ್ತಿದ್ದೇನೆ, ಈ ಸರ್ಕಾರದ ಪಾಪದ ಕೊಡ ತುಂಬಿದೆ. ಸಾಮರಸ್ಯ ಕೆಡಿಸುವ ಕೆಲಸದ ವಿರುದ್ಧ ನಾನು ದನಿ ಎತ್ತುತ್ತಿದ್ದೇನೆ ಎಂದರು.
ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ದಾಸರಹಳ್ಳಿ ಶಾಸಕ ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ ಎ ಶರವಣ ಸೇರಿ ,ಶಾಸಕರು, ಮಾಜಿ ಶಾಸಕರು,ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.