ಚನ್ನಪಟ್ಟಣ: ಮಾಜಿ ಪ್ರಧಾನಿ ದೇವೇಗೌಡರ ಕುರಿತಂತೆ ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ, ತಾಲೂಕಿನ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿಭವನ ಬಳಿಯಿಂದ ಕೆ.ಎನ್. ರಾಜಣ್ಣ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಕಾವೇರಿ ವೃತ್ತದಲ್ಲಿ ಸಮಾವೇಶಗೊಂಡು ಮಾಜಿ ಶಾಸಕ ಕೆ.ಎನ್.ರಾಜಣ್ಣ ಭಾವಚಿತ್ರಕ್ಕೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ನಗರದ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಜೆಡಿಎಸ್ ಹಿರಿಯ ಮುಖಂಡ ಸಿಂ.ಲಿಂ. ನಾಗರಾಜು ಮಾತನಾಡಿ, ದೇಶದ ಅಜಾತಶತ್ರು, ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ರಾಜಣ್ಣ ಆಡಿರುವ ಮಾತು ಆ ವ್ಯಕ್ತಿಯ ನೀಚ ಬುದ್ಧಿಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ಮಧುಗಿರಿಯಲ್ಲೇ ದೊರೆಯಲಿದ್ದು, ಇನ್ನು ಮುಂದೆ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು.
ಪಕ್ಷದಿಂದ ಉಚ್ಚಾಟನೆ ಮಾಡಿ: ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ಮಾತನಾಡಿ, ಹಿರಿಯ ರಾಜಕಾರಣಿ ದಿ. ಜಿ. ಮಾದೇಗೌಡರನ್ನು ಕುರಿತು ಮಂಡ್ಯ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವಹೇಳನ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಕ್ಷಣವೇ ಅವರನ್ನು ಉಚ್ಚಾಟನೆ ಮಾಡುವ ಜೆಡಿಎಸ್ ರಾಜಕೀಯ ಮುತ್ಸದಿತನವನ್ನು ಮೆರೆದಿತ್ತು. ಆದರೆ, ಕಾಂಗ್ರೆಸ್ ನಾಯಕರು, ರಾಜಣ್ಣನ ಹೇಳಿಕೆಯನ್ನು ಕೇವಲ ಖಂಡಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಕಾಂಗ್ರೆಸ್ ಪಕ್ಷದಿಂದ ರಾಜಣ್ಣ ಅವರನ್ನು ಉಚ್ಚಾಟಿಸುವ ಧೈರ್ಯ ತೋರುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇಳಿವಯಸ್ಸಲ್ಲೂ ಜನರ ಸೇವೆ: ಜೆಡಿಎಸ್ ಹಿರಿಯ ಮುಖಂಡ ಸಿ.ದೇವರಾಜು ಮಾತನಾಡಿ, ಎಚ್ .ಡಿ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಯಾಗಿ, ದೇಶದ ಪ್ರಧಾನಿಯಾಗಿ ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇಂತಹ ಹಿರಿಯ ಜೀವ ಇಳಿವಯಸ್ಸಿನಲ್ಲಿಯೂ ಜನರ ಸೇವೆಯಲ್ಲಿ ತೊಡಗಿದ್ದಾರೆ. ಅಂತಹವರ ಬಗ್ಗೆ ನಾಲಿಗೆ ಹರಿಯ ಬಿಟ್ಟು ಬಹಳ ಲಘುವಾಗಿ ಮಾತನಾಡಿರುವ ಕೆ.ಎನ್. ರಾಜಣ್ಣ ಅವರ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಕುಕ್ಕೂರುದೊಡ್ಡಿ ಜಯರಾಮು, ಗೋವಿಂದಹಳ್ಳಿ ನಾಗರಾಜು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಾಗನೂರು ಗಂಗರಾಜು, ಟಿಎಪಿ ಸಿಎಂ ಎಸ್ ಜಗದೀಶ್, ನಗರ ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಣ್ಣ, ಮಳೂರುಪಟ್ಟಣ ಸೊಸೈಟಿ ಅಧ್ಯಕ್ಷ ಮಳೂರುಪಟ್ಟಣ ರವಿ, ಮಂಜುನಾಥ್, ಸತೀಶ್ ಬಾಬು, ನರ್ಸರಿ ಲೋಕೇಶ್, ಸಿ.ಎಸ್. ಜಯ ಕುಮಾರ್, ಕೆ.ಜಯರಾಮು, ಮಹಿಳಾ ಮುಖಂಡರಾದ ರೇಖಾ ಉಮಾಶಂಕರ್, ಉಷಾ ನಂಜೇಗೌಡ, ಬಿಂದು ಹಾಗೂ ಮತ್ತಿತರರು ಇದ್ದರು.