ಬೆಂಗಳೂರು: ಎನ್ ಡಿ ಎ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಜೆಡಿಎಸ್ ಕುರಿತು ಕಾಂಗ್ರೆಸ್ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿ ಟೀಕಾ ಪ್ರಹಾರ ನಡೆಸಿದೆ.
ಜೆಡಿಎಸ್ ಇಂದು ಅಧಿಕೃತವಾಗಿ NDA ಮೈತ್ರಿಕೂಟದೊಳಗೆ ವಿಲೀನವಾಗಿದೆ,ಇನ್ಮುಂದೆ ಜೆಡಿಎಸ್ ಪಕ್ಷವು ತನ್ನ ಹೆಸರಿನ ಮುಂದಿರುವ “ಸೆಕ್ಯೂಲರ್ ಪದವನ್ನು ಕೈಬಿಡುವುದು ಒಳ್ಳೆಯದು.ಕೇವಲ ಜೆಡಿ ಎಂದು ಇಟ್ಟುಕೊಳ್ಳಬಹುದು ಇಲ್ಲವೇ ಕೆ ಡಿ ಎಂದು ಬದಲಿಸಿಕೊಳ್ಳಬಹುದು, ಕೆಡಿ ಅಂದರೆ ಅಪಾರ್ಥ ಬೇಡ! ಕೆಡಿ ಅಂದರೆ “ಕಮಲ ದಳ”!, ಪಕ್ಷ ವಿಸರ್ಜಿಸುತ್ತೇನೆ ಎಂದವರು ಜಾತ್ಯತೀತತೆಯನ್ನು ವಿಸರ್ಜಿಸಿದ್ದಾರೆ, ಅಭಿನಂದನೆಗಳು ಎಂದು ವ್ಯಂಗ್ಯ ಮಾಡಿದೆ.
”ಜೆಡಿಎಸ್ ಪಕ್ಷಕ್ಕೆ ರಾಜ್ಯಾಧ್ಯಕ್ಷ ಅಂತ ಒಬ್ಬರಿದ್ದರು ಈ ಚಿತ್ರದಲ್ಲಿ ಅವರೆಲ್ಲಿದ್ದಾರೆ? ಪಕ್ಷದ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳುವುದಕ್ಕೆ ರಾಜ್ಯಾಧ್ಯಕ್ಷರ ಅಭಿಪ್ರಾಯ ಬೇಕಿಲ್ಲವೇ? ಅವರ ಉಪಸ್ಥಿತಿ ಬೇಕಿಲ್ಲವೇ? ರಾಜ್ಯಾಧ್ಯಕ್ಷ ಹುದ್ದೆ ಎನ್ನುವುದು ಕುಮಾರಸ್ವಾಮಿಯವರ ಕುಟುಂಬ ಕೈ ಒರೆಸಲು ಇಟ್ಟುಕೊಂಡಿರುವ ಟಿಶ್ಯೂ ಪೇಪರ್ ಮಾತ್ರವೇ? ವಿಮಾನದ ಟಿಕೆಟ್ ಬುಕ್ ಮಾಡಲೊಬ್ಬರು, ಹೋಟೆಲ್ ರೂಮ್ ಬುಕ್ ಮಾಡಲೊಬ್ಬರು ಹಾಗೂ ತಮ್ಮ ಪುತ್ರ ಜೊತೆಗಿದ್ದರೆ ಸಾಕೇ?” ಎಂದು ಅಮಿತ್ ಶಾ, ಜೆ.ಪಿ ನಡ್ಡಾ ಅವರೊಂದಿಗೆ ಎಚ್ ಡಿ ಕೆ ಮತ್ತು ಪುತ್ರ ನಿಖಿಲ್ ಇರುವ ಫೋಟೋ ಹಾಕಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಅನುಪಸ್ಥಿತಿಯನ್ನು ಎತ್ತಿ ತೋರಿಸಿದೆ.
ಬಿಜೆಪಿಯ ಬಿ ಟೀಮ್ ಜೆಡಿಎಸ್ ಎಂಬುದಕ್ಕೆ ಇಂದು ಅಧಿಕೃತ ಮುದ್ರೆ ಬಿದ್ದಿದೆ, ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕದ್ದುಮುಚ್ಚಿ ಅಫೇರ್ ಇಟ್ಟುಕೊಂಡಿದ್ದ ಜೆಡಿಎಸ್ ಇಂದು ಬಹುರಂಗವಾಗಿ ಜೊತೆಗೂಡಿದೆ. ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ಬಂದಿಲ್ಲ ಎಂದಿದ್ದ ಕುಮಾರಸ್ವಾಮಿಯವರು ಇಂದು ದರಿದ್ರ ಬಂದಿದೆ ಎಂದು ಒಪ್ಪಿಕೊಂಡಂತಾಗಿದೆ.