Advertisement

JDS: ಬಿಜೆಪಿ ಮೈತ್ರಿಯಿಂದ ಅಲ್ಪ ಸಂಖ್ಯಾತ ಮತಗಳು ದೂರ

12:21 PM Oct 03, 2023 | Team Udayavani |

ರಾಮನಗರ: ಬಿಜೆಪಿ ಜತೆಗಿನ ಮೈತ್ರಿಯೊಂದಿಗೆ ಜೆಡಿಎಸ್‌ ತನಗಿದ್ದ ಅಲ್ಪಸಂಖ್ಯಾತ ಮತಗಳನ್ನು ಕಳೆದುಕೊಳ್ಳುವುದೇ..? ಇಂತಹುದೊಂದು ಚರ್ಚೆ ಜೆಡಿಎಸ್‌ ಕರ್ಮಭೂಮಿ ಎನಿಸಿರುವ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ.

Advertisement

ಕೋಮುವಾದಿ ಪಕ್ಷ ಎಂಬ ಕಾರಣಕ್ಕೆ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಜೆಡಿಎಸ್‌ ಈಬಾರಿ ಪೂರ್ಣ ಪ್ರಮಾಣದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದೆ. ಕುಮಾರಸ್ವಾಮಿ ಈ ಹಿಂದೆ ಬಿಜೆಪಿಯೊಂದಿಗೆ ಸಖ್ಯಮಾಡಿದ್ದರೂ ದೇವೇಗೌಡರು ಪ್ರಬಲವಾಗಿ ವಿರೋಧಿಸಿದ್ದ ಕಾರಣಕ್ಕೆ ಮೈತ್ರಿ ಮುಂದುವರಿದಿರಲಿಲ್ಲ. ಈ ಕಾರಣದಿಂದಾಗಿ ಅಲ್ಪಸಂಖ್ಯಾತ ಮತಗಳು ಪಕ್ಷದಿಂದ ದೂರಾಗಿರಲಿಲ್ಲ. ಇದೀಗ ಮೈತ್ರಿಗೆ ದೇವೇಗೌಡರು ಅನುಮತಿಯ ಮುದ್ರೆ ಒತ್ತಿದ್ದಾರೆ. ಬಿಜೆಪಿ ವಿರೋಧಿ ಮತಗಳು ಎನಿಸಿರುವ ಮುಸ್ಲಿಂ ಮತಗಳು ಜೆಡಿಎಸ್‌ ಕೈ ಜಾರಲಿದೆಯಾ ಎಂಬ ಪ್ರಶ್ನೆ ವ್ಯಾಪಕವಾಗಿ ಕಾಡುತ್ತಿದೆ.

ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಜೆಡಿಎಸ್‌ ಅಲ್ಪಸಂಖ್ಯಾತ ಮುಖಂಡರು ಬಿಜೆಪಿ ಮೈತ್ರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಕೆಲ ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್‌ ತೊರೆಯುವುದಾಗಿ ಘೋಷಿಸಿದ್ದಾರೆ. ಎಚ್‌ ಡಿಕೆ ಸ್ವಕ್ಷೇತ್ರ ಚನ್ನಪಟ್ಟಣದ ಪ್ರಮುಖ ಮುಸ್ಲಿಂ ಮುಖಂಡರಲ್ಲಿ ಒಬ್ಬರೆನಿಸಿದ್ದ ನಗರಸಭಾ ಮಾಜಿ ಅಧ್ಯಕ್ಷ ಜಬಿವುಲ್ಲಾಖಾನ್‌ ಘೋರಿ, ಮುಕ್ರಂ ಸೇರಿದಂತೆ ಹಲವಾರು ಅಲ್ಪಸಂಖ್ಯಾತ ಮುಖಂಡರು ಮಾಜಿ ಶಾಸಕ ಎಂ.ಸಿ.ಅಶ್ವತ್ಥ ಜೊತೆಗೂಡಿ ಕಾಂಗ್ರೆಸ್‌ ಸೇರಿದ್ದಾರೆ. ಬಿಜೆಪ ಸಖ್ಯ ಜೆಡಿಎಸ್‌ಗೆ ಮಾರಕವಾದೀತೆ ಎಂಬ ಪ್ರಶ್ನೆ ರಾಜಕೀಯ ಪಾಳಯದಲ್ಲಿ ಮೂಡುವಂತೆ ಮಾಡಿದೆ.

ನಿರ್ಣಾಯಕ ಪಾತ್ರ ವಹಿಸಿರುವ ಮುಸ್ಲಿಂ ಮತಗಳು: ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯ ಪ್ರಬಲ ಕೋಮಲ್ಲದಿದ್ದರೂ ನಿರ್ಣಾಯಕ ಮತದಾರರು ಎಂಬುದನ್ನು ಪ್ರತಿ ಚುನಾವಣೆಯಲ್ಲಿ ಪ್ರದರ್ಶಿಸುತ್ತಾ ಬಂದಿದ್ದಾರೆ. ಕೆಲಚುನಾವಣೆಗಳಲ್ಲಿ ಮುಸ್ಲಿಮರು ಒಗ್ಗಟ್ಟಿನಿಂದ ಒಂದೇ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುವ ಮೂಲಕ ಚುನಾವಣಾ ಫಲಿತಾಂಶ ವ್ಯತಿರಿಕ್ತವಾಗಲು ಕಾರಣವಾಗಿರುವುದು ಹಿಂದಿನ ಚುನಾವಣೆಗಲ್ಲಿ ಕಾಣಬಹುದು. ಇನ್ನು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರತಿನಿಧಿಸಿದ್ದ ರಾಮನಗರ ಮತ್ತು ಇದೀಗ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ದೊಡ್ಡಸಂಖ್ಯೆಯಲ್ಲಿದೆ. ಈ ಎರಡೂ ಕ್ಷೇತ್ರದಲ್ಲಿ ಜೆಡಿಎಸ್‌ ಮೇಲೆ ಪ್ರತಿಕೂಲ ವಾಗಲಿದೆ ಎಂಬ ಲೆಕ್ಕಾಚಾರಗಳು ಜಿಲ್ಲೆಯಲ್ಲಿ ಕೇಳಿಬರುತ್ತಿದೆ.

ದೂರಾಗಲಿದೆಯಾ ಅಲ್ಪಸಂಖ್ಯಾತ ಮತಗಳು: ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವಿನಲ್ಲಿ ಮುಸ್ಲಿಂ ಮತಗಳು ಪ್ರಮುಖ ಪಾತ್ರವಹಿಸುತ್ತಾ ಬಂದಿದ್ದು, ಹಿಂದಿನ ಚುನಾವಣೆಗಳನ್ನು ಪರಾಮರ್ಶಿಸಿದಾಗ ಮನದಟ್ಟಾ ಗುತ್ತದೆ. ಮುಸ್ಲಿಂ ಮತಗಳು ಜೆಡಿಎಸ್‌ ಜತೆಗೆ ನಿಲ್ಲುತ್ತಿದ್ದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಜಾತ್ಯತೀತ ತತ್ವಕ್ಕೆ. ಆದರೆ, ಇದೀಗ ಬಿಜೆಪಿ ಮೈತ್ರಿಯೊಂದಿಗೆ ಜೆಡಿಎಸ್‌ನ ಸ್ಯಾಕ್ಯುಲರ್‌ ಕಳಚಿದೆ ಎಂದು ವಿಪಕ್ಷಗಳು ಬೊಬ್ಬಿರಿಯುತ್ತಿದ್ದು, ಈ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಇದನ್ನೇ ದಾಳವಾಗಿಸಿಕೊಂಡು ಮುಂದಿನ ಚುನಾವಣೆ ಗಳಲ್ಲಿ ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ತಂತ್ರ ರೂಪಿಸಿದೆ. ಜಿಲ್ಲೆಯ ಮಟ್ಟಿಗೆ ಜೆಡಿಎಸ್‌ಗೆ ಈ ಮೈತ್ರಿ ವರವಾದೀತಾ, ಶಾಪವಾದೀತ ಚದುರುತ್ತಿರುವ ಮುಸ್ಲಿಂ ಮತಗಳನ್ನು ಉಳಿಸಿಕೊಳ್ಳುವಲ್ಲಿ ಎಚ್‌ಡಿಕೆ ಯಾವ ಪ್ರಯತ್ನ ಮಾಡುವರು ಕಾದು ನೋಡಬೇಕಿದೆ.

Advertisement

ಬಿಜೆಪಿ ಮೈತ್ರಿಯಾದ ಬಳಿಕ ಎಚ್‌ಡಿಕೆ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ನೀಡುತ್ತಿರುವ ಹೇಳಿಕೆಗಳು ನಮಗೆ ಬೇಸರ ತಂದಿದೆ. ನಾವು ದೇವೇಗೌಡರನ್ನು ನೋಡಿ, ಅವರ ಜಾತ್ಯತೀತ ತತ್ವವನ್ನು ನಂಬಿ ಎರಡು ಚುನಾವಣೆಗಳಲ್ಲಿ ಎಚ್‌ಡಿಕೆ ಗೆಲುವಿಗೆ ಸಹಕಾರ ನೀಡಿದ್ದೇವೆ. ನಮ್ಮ ಮತ ಬೇಡ ಎನ್ನುವರು ಇದೀಗ ನಮ್ಮ ಮತದಿಂದ ಗೆದಿದ್ದಾರೆ, ರಾಜೀನಾಮೆ ನೀಡಲಿ. ಮೈತ್ರಿ ಖಂಡಿಸಿ ಚನ್ನಪಟ್ಟಣದ ಮುಸ್ಲಿಂ ನಾಯಕರು ಜೆಡಿಎಸ್‌ ತೊರೆಯುತ್ತಿದ್ದಾರೆ. – ಜಭಿವುಲ್ಲಾಖಾನ್‌ ಘೋರಿ, ನಗರಸಭಾ ಮಾಜಿ ಅಧ್ಯಕ್ಷ ಚನ್ನಪಟ್ಟಣ

ಮತಕ್ಕಾಗಿ ಯಾವುದೇ ಒಂದು ಸಮುದಾಯವನ್ನು ಓಲೈಕೆ ಮಾಡಲಾರೆ, ಮುಸಲ್ಮಾನರಿಗೆ ನಾನು ಅನ್ಯಾಯ ಮಾಡಿಲ್ಲ. ಯಾವ ಸಮುದಾಯವನ್ನು ನಾನು ರಾಜಕೀಯ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡಿಲ್ಲ. ಈ ಮಾತನ್ನು ಸ್ಪಷ್ಟ ಹೇಳುತ್ತೇನೆ. ನಮ್ಮ ಬದ್ಧತೆ ನಿಮಗೆ ಗೊತ್ತಿದೆ. ಕಾಂಗ್ರೆಸ್‌ ಪಕ್ಷದ ರೀತಿ ನಾನು ಪೊಳ್ಳು ಭರವಸೆ ನೀಡಲಾರೆ. – ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next