Advertisement

ಇಂದಿನಿಂದ ಜೆಡಿಎಸ್‌ “ಪಂಚರತ್ನ’ರಥಯಾತ್ರೆ

07:58 PM Oct 31, 2022 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಜೆಡಿಎಸ್‌ ಪಕ್ಷ ನ.1ರಿಂದ ಮೊದಲ ಹಂತದ “ಪಂಚರತ್ನ ರಥಯಾತ್ರೆ’ ಆರಂಭಿಸಲಿದೆ.

Advertisement

ಈ ಯಾತ್ರೆಯು ಮಂಗಳವಾರ ಕೋಲಾರ ಜಿಲ್ಲೆಯ ಮುಳಬಾಗಿಲಿನ ಕುರುಡುಮಲೆಯಿಂದ ಆರಂಭವಾಗಿ ಡಿಸೆಂಬರ್‌ 6ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟು 35 ದಿನಗಳ ಕಾಲ ನಡೆಯುವ ಈ ಯಾತ್ರೆ ಪ್ರತಿ ದಿನ ಒಂದರಂತೆ ಒಟ್ಟು 35 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಯಾತ್ರೆ ಗಡಿ ಜಿಲ್ಲೆ ಕೋಲಾರದ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕುರುಡುಮಲೆ ಗಣಪತಿ ದೇವಾಲಯದಿಂದ ಆರಂಭವಾಗಲಿದೆ. ಬೆಳಗ್ಗೆ 9 ಗಂಟೆಗೆ ಮಹಾಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಮುಳಬಾಗಿಲು ಪಟ್ಟಣದ ತಿರುಪತಿ ಬೈಪಾಸ್‌ ರಸ್ತೆಯಲ್ಲಿರುವ ಬಾಲಾಜಿ ಭವನದ ಪಕ್ಕದ ಜಾಗದಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಮಂದಿ ಭಾಗವಹಿಸಲಿದ್ದಾರೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪಕ್ಷದ ಯುವ ಘಟಕದ ಅಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಮಾಜಿ ಸಚಿವರು, ಎಲ್ಲ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳೂ ಪಾಲ್ಗೊಳ್ಳಲಿದ್ದಾರೆ.

ಎಚ್‌ಡಿಕೆ ಗ್ರಾಮ ವಾಸ್ತವ್ಯ
ಯಾತ್ರೆಯ ಮೊದಲ ದಿನವಾದ ಮಂಗಳವಾರ ಮುಳಬಾಗಿಲು ಕ್ಷೇತ್ರದ ಗ್ರಾಮವೊಂದರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹೂಡುವರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಥವಾ ದೇಗುಲದಲ್ಲಿ ಉಳಿದುಕೊಳ್ಳಲಿದ್ದಾರೆ. ಈ ವೇಳೆ ಅವರು ಗ್ರಾಮಸ್ಥರ ಜತೆ ಸಂವಾದ, ವಿಚಾರ ವಿನಿಮಯ ನಡೆಸಲಿದ್ದಾರೆ. ಮುಖ್ಯವಾಗಿ ಮಹಿಳೆಯರು, ಯುವಕರು, ರೈತರು, ವೃದ್ಧರ ಜತೆ ಚರ್ಚೆ, ಹಳ್ಳಿಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುವುದರ ಜತೆಗೆ, ಸ್ವತಃ ತಾವೇ ಗ್ರಾಮ ಸಂಚಾರ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿ ಕೂಡ ಸಾಥ್‌ ನೀಡಲಿದ್ದಾರೆ.

Advertisement

ಎಲ್ಲೆಲ್ಲಿ; ಯಾವಾಗ ರಥಯಾತ್ರೆ?
ದಿನಕ್ಕೊಂದು ಕ್ಷೇತ್ರದಂತೆ ಕ್ರಮವಾಗಿ ಬಂಗಾರಪೇಟೆ, ಮಾಲೂರು, ಕೋಲಾರ, ಶ್ರೀನಿವಾಸಪುರ; ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ; ತುಮಕೂರು ಜಿಲ್ಲೆ ಯ ತುಮಕೂರು ನಗರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು; ಹಾಸನ ಜಿಲ್ಲೆಯ ಬೇಲೂರು, ಅರಸೀಕೆರೆ, ಹಾಸನ, ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣದಲ್ಲಿ ಯಾತ್ರೆ ನಡೆಯಲಿದೆ. ನಂತರ ನ.30ರಂದು ತುಮಕೂರು ಜಿಲ್ಲೆಯ ಕುಣಿಗಲ್ , ಡಿ.1ರಂದು ತುಮಕೂರು ಗ್ರಾಮಾಂತರ ಹಾಗೂ ಡಿ.2ರಿಂದ ಕ್ರಮವಾಗಿ ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ, ಆನೇಕಲ್‌ನಲ್ಲಿ ರಥಯಾತ್ರೆ ನಡೆಯಲಿದೆ. ಡಿ.6ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ನಲ್ಲಿ ಮೊದಲ ಹಂತದ ರಥಯಾತ್ರೆ ಅಂತ್ಯಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next