ಹುಬ್ಬಳ್ಳಿ: ಕೃಷಿ ಉತ್ಪನ್ನಗಳ ಬೆಲೆ ನಿಗದಿ ವಿಚಾರದಲ್ಲಿ ಡಾ| ಸ್ವಾಮಿನಾಥನ್ ವರದಿ ಶಿಫಾರಸುಗಳ ಜಾರಿಗೆ ಅಸಾಧ್ಯ ಎಂದು ಕೇಂದ್ರದ ಎನ್‌ಡಿಎ ಸರಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಇದನ್ನು ಕೂಡಲೇ ಹಿಂಪಡೆದು ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಲು ವರದಿ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಜೆಡಿಎಸ್ ಮಹಾನಗರ ಜಿಲ್ಲಾ ರೈತ ಮೋರ್ಚಾದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಡಾ| ಸ್ವಾಮಿನಾಥನ್ ಆಯೋಗ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ. 50ರಷ್ಟು ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲ ನಿಗದಿಪಡಿಸಬೇಕು ಎಂದು ಶಿಫಾರಸು ಮಾಡಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಡಾ| ಸ್ವಾಮಿನಾಥನ್ ಆಯೋಗ ವರದಿ ಜಾರಿಗೆ ಬದ್ಧ ಎಂದಿದ್ದರು.
ಇದೀಗ ಅವರದ್ದೇ ಸರಕಾರ ವರದಿ ಜಾರಿ ಅಸಾಧ್ಯ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಇದು ರೈತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ರೈತ ಘಟಕದ ರಾಜ್ಯಾಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಮಾತನಾಡಿ, ದೇಶದಲ್ಲಿ ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅವರೆಲ್ಲರಿಗೂ ಸ್ಥಳೀಯ ಸರಕಾರಗಳು ಪರಿಹಾರ ನೀಡುವ ಮೂಲಕ ಕೈತೊಳೆದುಕೊಳ್ಳುತ್ತಿವೆ. ಆದರೆ, ಕೇಂದ್ರ ಸರಕಾರ ಮಾತ್ರ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿವೆ. ಬರ, ಬೆಳೆನಷ್ಟ, ಸಾಲಬಾಧೆಯಿಂದ ರೈತರು ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಇಷ್ಟಾದರು ಕೇಂದ್ರ ಸರಕಾರ ರೈತರ ನೆರವಿಗೆ ಧಾವಿಸುವ ಬದಲು ಅನ್ಯಾಯಕ್ಕೆ ಮುಂದಾಗಿದ್ದು, ಕೂಡಲೇ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಪ್ರಮಾಣಪತ್ರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣಾ ಕೊರವಿ ಸೇರಿದಂತೆ ಇನ್ನಿತರರು ಮಾತನಾಡಿದರು.
ಇದಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದ ನಕಲು ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ತಹಶೀಲ್ದಾರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ವಿಕಾಸ ಸೊಪ್ಪಿನ, ಸುರೇಶಗೌಡ ಪಾಟೀಲ, ಶಿವಣ್ಣ ಹುಬ್ಬಳ್ಳಿ, ಶ್ರೀಕಾಂತ ಮಗಜಿಕೊಂಡಿ, ಇರ್ಷಾದ್ ಭದ್ರಾಪುರ, ಎ.ಎ. ದೇಸಾಯಿ, ಅರುಣಗೌಡ ಪಾಟೀಲ ಇತರರಿದ್ದರು.