ಹುಬ್ಬಳ್ಳಿ: ರಾಜ್ಯದಲ್ಲಿ ಬಹುತೇಕ ಕಡೆ ಪಕ್ಷಕ್ಕೆ ಸ್ವಂತ ಕಟ್ಟಡ, ಕಚೇರಿಯೂ ಇಲ್ಲ. ಆದರೆ ಹುಬ್ಬಳ್ಳಿ-ಧಾರವಾಡದಲ್ಲಿ ಪಕ್ಷದ ಕಚೇರಿಯಿದೆ ಎಂದು ಹೇಳಿಕೊಳ್ಳುವ ಶಕ್ತಿ ನಮ್ಮ ಪಾಲಿಗೆ ಬಂದಿದ್ದು ಹೆಮ್ಮೆಯ ಸಂಗತಿ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ನ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ನೆಹರು ಮೈದಾನ ಬಳಿಯ ಕನಕದಾಸ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಜೆಡಿಎಸ್ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಅವಳಿ ನಗರದಲ್ಲಿ ಪಕ್ಷದ ನೂತನ ಕಚೇರಿ ಆರಂಭಗೊಳ್ಳುತ್ತಿರುವುದು ಒಳ್ಳೆಯ ದಿನಗಳ ಸಂಕೇತ.
ಪಕ್ಷವು ಕಾಂಗ್ರೆಸ್‌ನಿಂದ ದೂರವಾದ ಬಳಿಕ ಬಹಳಷ್ಟು ಕಡೆ ಪಕ್ಷದ ಕಚೇರಿ, ಕಟ್ಟಡಗಳು ಜೆಡಿಎಸ್‌ಗೆ ದಕ್ಕಲಿಲ್ಲ. ಇದಕ್ಕೆ ಕೆಲವೆಡೆ ತಾಂತ್ರಿಕ ಹಾಗೂ ಕೋರ್ಟ್ ನಿರ್ಧಾರಗಳು ಕಾರಣ. ಈ ಬಗ್ಗೆ ಈಗ ಹೆಚ್ಚಿಗೆ ಹೇಳಿದರೆ ಯಾವ ಪ್ರಯೋಜನವಿಲ್ಲ. ಪಕ್ಷವು ಬೆಂಗಳೂರಿನಲ್ಲಿ ಸ್ವಂತ ಕಚೇರಿ ಹೊಂದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಮಾತನಾಡಿ, ಮಹದಾಯಿ ವಿಷಯದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಈ ಭಾಗದ ಜನರಿಗೆ ವಂಚಿಸುತ್ತ ಬಂದಿವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ಉತ್ತರ ಕರ್ನಾಟಕ ಭಾಗದ 30-35 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕುಮಾರಸ್ವಾಮಿ ಸಿಎಂ ಮಾಡುವುದೇ ನಮ್ಮ ಗುರಿ ಎಂದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಎನ್.ಎಚ್. ಕೋನರಡ್ಡಿ, ಮುಜಾಹಿದ್ ಕಾಂಟ್ರಾಕ್ಟರ್, ಪಾಲಿಕೆ ಸದಸ್ಯರಾದ ಅಲ್ತಾಫ್ ಕಿತ್ತೂರ, ಸಂತೋಷ ಹಿರೇಕೆರೂರ ಇದ್ದರು. ರಾಜಣ್ಣ ಕೊರವಿ ಸ್ವಾಗತಿಸಿದರು.