Advertisement

ವಿಧಾನಪರಿಷತ್ ನಲ್ಲಿ ಜೆಡಿಎಸ್ ಸಂಖ್ಯಾಬಲ ಇಳಿಕೆ…ಮೇಲ್ಮನೆ ನಾಯಕ ಯಾರು?

10:27 AM Jun 23, 2022 | Team Udayavani |

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಜೆಡಿಎಸ್‌ ಸಂಖ್ಯಾಬಲ ಇಳಿಯುತ್ತಲೇ ಇದ್ದು ಕಳೆದ ಎರಡು ವರ್ಷದ ಅವಧಿಯಲ್ಲಿ ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ ಸದಸ್ಯರ ಸಂಖ್ಯೆ ಅರ್ಧಕ್ಕೆ ಕುಸಿದಿದೆ.

Advertisement

ಇದನ್ನೂ ಓದಿ:ಕಂಪನಿ ವಸ್ತು ಖರೀದಿಸಿದ್ರೆ ಉಚಿತ ಪ್ರವಾಸದ ಆಫರ್‌: ಕೋರ್ಟ್‌ ಮೆಟ್ಟಿಲೇರಿದ ಮಹಿಳೆ

ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ, ವಿಧಾನಸಭೆಯಿಂದ ವಿಧಾನಪರಿಷತ್ತು, ಶಿಕ್ಷಕರ- ಪದವೀಧರ ಕ್ಷೇತ್ರಗಳಿಂದ ವಿಧಾನಪರಿ ಷತ್ತಿಗೆ ನಡೆದ ಚುನಾವಣೆಗಳ ಬಳಿಕ ಜೆಡಿಎಸ್‌ ಸಂಖ್ಯಾ ಬಲ ಇಳಿಕೆ ಕ್ರಮಾಂಕದಲ್ಲಿ ಸಾಗಿದೆ. 2020ರ ಆರಂಭದಲ್ಲಿ 16 ಇದ್ದ ಜೆಡಿಎಸ್‌ ಸದಸ್ಯರ ಸಂಖ್ಯೆ ಇದೀಗ ಅರ್ಧದಷ್ಟು 8ಕ್ಕೆ ಇಳಿದಿದೆ. ಸದ್ಯದ ಸ್ಥಿತಿ ಗಮನಿಸಿದರೆ 2024ರವರೆಗೆ ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ ಸಂಖ್ಯಾಬಲ ಎಂಟರ ಗಡಿ ದಾಟುವ ಸಾಧ್ಯತೆಗಳಿಲ್ಲ.

ಹಳೇ ಮೈಸೂರು ಭಾಗದ ಸ್ಥಳೀಯ ಸಂಸ್ಥೆಗಳು, ಶಿಕ್ಷಕರ-ಪದವೀಧರ ಕ್ಷೇತ್ರಗಳಲ್ಲಿ ಜೆಡಿಎಸ್‌ ಹಿಡಿತ ಸಡಿಲಗೊಳ್ಳುತ್ತಿದ್ದು, ಒಂದೊಂದಾಗಿ ಕ್ಷೇತ್ರಗಳು ಕೈತಪ್ಪಿ ಹೋಗುತ್ತಿವೆ. ಕಳೆದ ವರ್ಷ ನಡೆದ ಮಂಡ್ಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿತು. ಈಗ ದಕ್ಷಿಣ ಪದವೀಧರ ಕ್ಷೇತ್ರ ಸಹ ಜೆಡಿಎಸ್‌ನಿಂದ ಕೈತಪ್ಪಿ ಹೋಗಿದ್ದು, ಕಾಂಗ್ರೆಸ್‌ ಪಾಲಾಗಿದೆ. ಈ ಫ‌ಲಿತಾಂಶ ಪಕ್ಷ ಸಂಘಟನೆಯ ಮೇಲೆ ನೇರ ಪರಿಣಾಮ ಬೀರುವ ಲಕ್ಷಣಗಳು ಕಂಡುಬರುತ್ತಿದೆ.

2024ರಲ್ಲಿ ದಕ್ಷಿಣ ಶಿಕ್ಷಕರ ಹಾಗೂ ನೈರುತ್ಯ ಶಿಕ್ಷಕ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಸದ್ಯ ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರತಿನಿಧಿಸುತ್ತಿದೆ. ಆದರೆ, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪ್ರತಿನಿಧಿಸುತ್ತಿರುವ ಮರಿತಿಬ್ಬೇಗೌಡ, ಈಗಾಗಲೇ ಜೆಡಿಎಸ್‌ನಿಂದ ಹೊರಗೆ ಕಾಲಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರ ಜೆಡಿಎಸ್‌ ಉಳಿಸಿಕೊಳ್ಳಲು ಸಾಹಸ ಪಡಬೇಕಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಮೇಲ್ಮನೆ ನಾಯಕ ಯಾರು?: ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‌ ಪಕ್ಷ ಅಧಿಕೃತ ವಿರೋಧಪಕ್ಷ ಅಲ್ಲದಿದ್ದರೂ ಒಬ್ಬರನ್ನು ನಾಯಕರನ್ನಾಗಿ ನೇಮಕ ಮಾಡಲಾಗುತ್ತಿತ್ತು. ಅದರಂತೆ ಕೆ.ಟಿ. ಶ್ರೀಕಂಠೇಗೌಡ ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ ನಾಯಕರಾಗಿದ್ದರು. ಆದರೆ, ಅವರ ಅವಧಿ ಜುಲೈ 4ರವರೆಗೆ ಇದ್ದು, ಮುಂದೆ ಹೊಸಬರ ಆಯ್ಕೆ ಮಾಡಬೇಕಾಗಿದೆ. 8 ಸದಸ್ಯರಲ್ಲಿ ಎಸ್‌.ಎಲ್‌. ಭೋಜೇಗೌಡ, ಬಿ.ಎಂ. ಫಾರೂಕ್‌, ಕೆ.ಎ ತಿಪ್ಪೇಸ್ವಾಮಿ, ಎರಡನೇ ಬಾರಿಗೆ ಆಯ್ಕೆಯಾಗಿರುವ ಟಿ.ಎ.ಶರವಣ ಅವರೂ ಇದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಬೆಂಬಲಿಸಿಲ್ಲವೆಂಬ ಆರೋಪ ತೊಳೆದುಕೊಳ್ಳಲು ಬಿ.ಎಂ. ಫಾರೂಕ್‌ ಅವರನ್ನು ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ ನಾಯಕರಾಗಿ ಆಯ್ಕೆ ಮಾಡುವ ಸಾಧ್ಯತೆಯೂ ಇಲ್ಲದಿಲ್ಲ ಎಂದು ಪಕ್ಷದ ಮೂಲಗಳು ಹೇಳುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next