ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೆ ಟಾಂಗ್ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎರಡೂ ಪಕ್ಷಗಳ ಜತೆ ಸೌಹಾರ್ದ ಸಂಬಂಧ ಕಾಯ್ದುಕೊಳ್ಳುವ ಮೂಲಕ ಲೆಕ್ಕಾಚಾರದ ಹೆಜ್ಜೆ ಇಡುತ್ತಿದ್ದಾರೆ.ಬಿಜೆಪಿ ಸರ್ಕಾರ ಪತನವಾಗಲು ಬಿಡುವುದಿಲ್ಲ, ಕೀಲಿ ಕೈ ನನ್ನ ಬಳಿಯಿದೆ ಎಂಬ ಕುಮಾರಸ್ವಾಮಿಯವರ ಹೇಳಿಕೆ ಜೆಡಿಎಸ್‌ನವರಿಗೆ ಅಚ್ಚರಿ ಉಂಟುಮಾಡಿದೆ.
ಬಿಜೆಪಿಯತ್ತ ಚಿತ್ತ ಹರಿಸಿರುವ ಜೆಡಿಎಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಹಾಗೂ ಅವರಿಗೆ ಗಾಳ ಹಾಕಲು ಬಿಜೆಪಿಯ ಕೇಂದ್ರ ನಾಯಕರು ಅವಕಾಶ ಕೊಡದಂತೆ ನೋಡಿಕೊಳ್ಳುವ ಕಾರ್ಯತಂತ್ರ ಇದು ಎಂಬ ಮಾತುಗಳು ಕೇಳಿಬರುತ್ತಿವೆ. ಉಪ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗಬಹುದೆಂದು ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿದ್ದು, ಅದಕ್ಕೆ ಕುಮಾರಸ್ವಾಮಿ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ರಾಜಕೀಯವಾಗಿ ಏನಾದರೂ ಆಗಬಹುದು, ಕುಮಾರಸ್ವಾಮಿಯವರಿಗೆ ಕಾಂಗ್ರೆಸ್‌ನಲ್ಲಿ ಸಿದ್ದ ರಾಮಯ್ಯ ಹಾಗೂ ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ವಿರೋಧಿಗಳು. ಉಳಿದಂತೆ ಎರಡೂ ಪಕ್ಷದ ಕೇಂದ್ರ ನಾಯಕರು, ರಾಜ್ಯ ನಾಯಕರ ಜತೆ ಕುಮಾರಸ್ವಾಮಿಯವರಿಗೆ ಉತ್ತಮ ಬಾಂಧವ್ಯವಿದೆ. ಹೀಗಾಗಿ, ರಾಜಕಾರಣದಲ್ಲಿ ಜೆಡಿಎಸ್‌ನ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮದೇ ಆದ ತಂತ್ರಗಾರಿಕೆ ರೂಪಿಸುತ್ತಿದ್ದಾರೆಂದು ಹೇಳಲಾಗಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 8 ಸ್ಥಾನ ಗೆಲ್ಲದಿದ್ದರೆ ಸರ್ಕಾರಕ್ಕೆ ಬಹುಮತ ಸಿಗುವುದಿಲ್ಲ.
ಆಗ, ಬೇರೆ ರೀತಿಯ ಸನ್ನಿವೇಶ ಸೃಷ್ಟಿಯಾದರೆ ಜೆಡಿಎಸ್‌ನ ಅನಿವಾರ್ಯತೆ ಬಿಜೆಪಿಗೆ ಉಂಟಾಗಲಿದೆ. ಆಗ, ಮತ್ತೂಂದು ಸುತ್ತಿನ “ಆಟ’ ಆಡಬಹುದು ಎಂಬುದು ಕುಮಾರಸ್ವಾಮಿ ಅವರ ಲೆಕ್ಕಾಚಾರ. ಬಿಜೆಪಿಯತ್ತ ವಾಲಿರುವ ಐವರು ಜೆಡಿಎಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶವೂ ಇದೆ. ಮುಂದೆ ಬಿಜೆಪಿ ಜತೆ ಜೆಡಿಎಸ್ ಸೇರುವ ಸಾಧ್ಯತೆ ಇದೆ ಎಂದರೆ ಬಿಜೆಪಿಗೆ ಹೋಗುವ ಜೆಡಿಎಸ್ ಶಾಸಕರು ಯೋಚಿಸುವಂತಾಗುತ್ತದೆ. ಇದೇ ಕಾರಣಕ್ಕೆ ಕುಮಾರಸ್ವಾಮಿ ಇಂತದ್ದೊಂದು ಬಾಣ ಬಿಟ್ಟಿದ್ದಾರೆ.
ಬಿಜೆಪಿಗೆ ಬಗ್ಗೆ ಕುಮಾರಸ್ವಾಮಿ ಸಾಫ್ಟ್: ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿರುವುದು ಹಾಗೂ ಅವರ ಆಪ್ತ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಜೆಡಿಎಸ್ ಜತೆಗೆ ಯಾವುದೇ ರೀತಿಯ ಸಂಬಂಧ ಅನುಮಾನ. ಹೀಗಾಗಿ ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿ ಹಾಗೂ ಜೆಡಿಎಸ್ ಉಳಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಬಿಜೆಪಿಗೆ ಬಗ್ಗೆ ಸಾಫ್ಟ್ ಆಗಿದ್ದಾರೆ ಎಂಬ ಮಾತುಗಳೂ ಇವೆ.
ಬಿಜೆಪಿ ಪರ ಒಲವು ತೋರಿಲ್ಲ
ಹಾವೇರಿ: “ನಾನು ಬಿಜೆಪಿ ಪರ ಒಲವು ತೋರಿಲ್ಲ. ನಾನು ಯಾವ ದೃಷ್ಟಿಕೋನದಲ್ಲಿ ಯಾವ ಹೇಳಿಕೆ ನೀಡಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವರಿಗೆ ಪ್ರಸ್ತುತ ಸಾರ್ವತ್ರಿಕ ಚುನಾವಣೆಗೆ ಹೋಗುವ ಹಂಬಲವಿದೆ. ಆದರೆ, ಈಗ ಚುನಾವಣೆಗೆ ಹೋಗುವುದು ಸೂಕ್ತ ಸಂದರ್ಭವಲ್ಲ. ರಾಜ್ಯದ 13 ಜಿಲ್ಲೆಗಳಲ್ಲಿ ನೆರೆಯಿಂದ ದೊಡ್ಡ ಮಟ್ಟದ ಅನಾಹುತವಾಗಿದೆ. ಚುನಾವಣೆಗೆ ಹೋಗುವ ಮುನ್ನ ಬದುಕು ಕಟ್ಟಿ ಕೊಡುವ ಕೆಲಸ ಮಾಡಬೇಕಾಗಿದೆ. ಸರ್ಕಾರ ಅಸ್ಥಿರಗೊಳಿಸಿ ಚುನಾವಣೆಗೆ ಹೋಗುವುದು ಸೂಕ್ತವಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದೇನೆ ಎಂದರು.
* ಎಸ್. ಲಕ್ಷ್ಮಿನಾರಾಯಣ