ಬೆಂಗಳೂರು: ಬಿಜೆಪಿ ಪಕ್ಷದವರು ಜೆಡಿಎಸ್ ಪಕ್ಷದ ಶಾಸಕರಿಗೆ ನೂರು ಕೋಟಿ ರೂಪಾಯಿ ಹಾಗೂ ಕ್ಯಾಬಿನೆಟ್ ದರ್ಜೆ ಸ್ಥಾನ ಕೊಡುವ ಆಫರ್ ಕೊಟ್ಟಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಮಾರಸ್ವಾಮಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದು, ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಆಪರೇಷನ್ ಕಮಲ ನಡೆಸಲು ಬಿಜೆಪಿಯವರಿಗೆ ಹಣ ಎಲ್ಲಿಂದ ಬರುತ್ತದೆ, ಬಿಜೆಪಿಯವರು ಕುದುರೆ ವ್ಯಾಪಾರಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ದೂರಿದರು.
ಬಿಜೆಪಿಯಿಂದಲೂ ಆಫರ್ ಬಂದಿದೆ:
ನನಗೆ ಕಾಂಗ್ರೆಸ್, ಬಿಜೆಪಿಯಿಂದ ಆಫರ್ ಬಂದಿದೆ. ಆದರೆ ನಮ್ಮದು ಅಧಿಕಾರಕ್ಕಾಗಿ ಹಾತೊರೆಯುವ ಕುಟುಂಬವಲ್ಲ. ಈ ಹಿಂದೆ ನಾನು ತಂದೆಗೆ ತಿಳಿಸದೆ ಬಿಜೆಪಿ ಜತೆ ಕೈಜೋಡಿಸಿದ್ದೆ. ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೆ. ಇದು ನನ್ನಿಂದಾದ ದೊಡ್ಡ ತಪ್ಪು. ಹೀಗಾಗಿ ಈಗ ನನ್ನ ತಂದೆಗೆ ಅಂಟಿದ್ದ ಕಪ್ಪು ಚುಕ್ಕೆಯನ್ನು ತೊಳೆಯುವ ಅವಕಾಶ ಒದಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಆಫರ್ ತಿರಸ್ಕರಿಸಿ, ಕಾಂಗ್ರೆಸ್ ಜತೆ ಮೈತ್ರಿಗೆ ಒಪ್ಪಿಗೆ ನೀಡಿರುವುದಾಗಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.