ವಿಧಾನಸಭೆ: ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಹುತಾತ್ಮರಾದ ಸ್ವಾತಂತ್ರ್ಯ ಯೋಧರು ಹಾಗೂ ಸೈನಿಕರಿಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ಯೋಜನೆ ರೂಪಿಸಿ ಆ ಕುಟುಂಬಗಳಿಗೆ ಗೌರವ ಸಲ್ಲಿಸುವ ಕೆಲಸ ಆಗಬೇಕು ಎಂದು ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ್ ಆಗ್ರಹಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿಯವರು ಆಜಾದಿಕಾ ಅಮೃತ ಮಹೋತ್ಸವ ಹೆಸರು ಕೊಟ್ಟಿದ್ದಾರೆ. ರಾಜ್ಯ ಬಜೆಟ್‌ನಲ್ಲೂ ಇದು ಪ್ರಸ್ತಾಪವಾಗಿದೆ. ಆದರೆ, ವಿಶೇಷ ಯೋಜನೆ ರೂಪಿಸದಿದ್ದರೆ ಇದಕ್ಕೆ ಅರ್ಥ ಇರುವುದಿಲ್ಲ ಎಂದು ಹೇಳಿದರು.
ರೈತರ ಆದಾಯ ದುಪ್ಪಟ್ಟು ಎಂದು ಹೇಳಲಾಗಿದೆ. ಇದು ಹೆಸರಿಗೆ ಮಾತ್ರ, ಅಸಲಿಗೆ ಅವನು ಬೆಳೆದ ಬೆಳೆಗೆ ನ್ಯಾಯುತ ಬೆಲೆ ಸಿಕ್ಕರೆ ಸಾಕಾಗಿದೆ. ಘೋಷಣೆ ಬಿಟ್ಟು ರಾಜ್ಯ ಸರ್ಕಾರ ವಾಸ್ತವವಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ, ಬೆಳೆ ನಷ್ಟವಾದರೆ ಷರತ್ತು ಇಲ್ಲದೆ ವಿಮೆ ಸಿಕ್ಕರೆ ಸಾಕಾಗಿದೆ. ಇದರ ಬಗ್ಗೆ ಸರ್ಕಾರ ಹೆಚ್ಚು ಗಮನಹರಿಸಬೇಕು ಎಂದು ಆಗ್ರಹಿಸಿದರು.
ಶಾಸಕರ ಅನುದಾನ ನಾಲ್ಕು ಕೋಟಿ ರೂ.ಗೆ ಹೆಚ್ಚಿಸಿ, ಕೋವಿಡ್ ಕಾರಣದಿಂದ ತಡೆಹಿಡಿಯಲಾಗಿದ್ದ ಅನುದಾನ ವಾಪಸ್ ಕೊಡಿ ಎಂದು ಒತ್ತಾಯಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಧ್ವನಿಗೂಡಿಸಿ, ವಾರ್ಷಿಕ ಐದು ಕೋಟಿ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಸಬ್ ಕಾ ವಿಶ್ವಾಸ್ ಸೇ ಕಾಂಗ್ರೆಸ್ ಸರ್ವನಾಶ್: ಬೋಪಯ್ಯ
ಕುರಿ-ಮೇಕೆ ಮೃತಪಟ್ಟರೆ 3500 ಸಾವಿರ ರೂ. ಪರಿಹಾರ ಅನುಗ್ರಹ ಯೋಜನೆಯಡಿ ನೀಡುವುದಾಗಿ ಹೇಳಿದ್ದೀರಿ. ಇದು ಯಾವುದಕ್ಕೂ ಸಾಲದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿಟ್ಟಿರುವ 3 ಸಾವಿರ ಕೋಟಿ ರೂ. ಶಿಕ್ಷಣ ಹಾಗೂ ಆರೋಗ್ಯಕ್ಕೆ ವೆಚ್ಚ ಮಾಡಿ. ಮುಂದಿನ ಬಾರಿ ಬೇರೆ ವಲಯಕ್ಕೆ ವೆಚ್ಚ ಮಾಡಿ. ಹೀಗೆ ಮಾಡಿದರೆ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದರು.