Advertisement
ಉಪ ಚುನಾವಣೆ ವಿಚಾರದಲ್ಲಿ ಜೆಡಿಎಸ್ ಸುಪ್ರೀಂಕೋರ್ಟ್ ತೀರ್ಮಾನದತ್ತ ಚಿತ್ತ ಹರಿಸಿ ಕಾದು ಕುಳಿದಿತ್ತು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ಮೈ ಕೊಡವಿ ಅಖಾಡಕ್ಕೆ ಇಳಿದಿರುವುದರಿಂದ ಜೆಡಿಎಸ್ ಇದೀಗ ಆ ಎರಡು ಪಕ್ಷಗಳ ಅತೃಪ್ತರಿಗೆ ಗಾಳ ಹಾಕಲು ಮುಂದಾಗಿದೆ.
Related Articles
Advertisement
ಇನ್ನು, ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಸೆಳೆಯಲು ಪ್ರಯತ್ನಿಸಿದ್ದ ಜವರಾಯಿ ಗೌಡರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅವರೇ ಕಣಕ್ಕೆ ಇಳಿಯುವುದು ಖಚಿತ. ಎರಡು ಬಾರಿ ಸ್ಪರ್ಧೆ ಮಾಡಿ ಸೋತಿರುವ ಜವರಾಯಿ ಗೌಡರಿಗೆ ಅನುಕಂಪ ಇರುವುದರಿಂದ ಆ ಕ್ಷೇತ್ರದ ಬಗ್ಗೆ ಜೆಡಿಎಸ್ ಹೆಚ್ಚು ವಿಶ್ವಾಸ ಇರಿಸಿಕೊಂಡಿದೆ.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಶಾಸಕ ಬಚ್ಚೇಗೌಡರಿಗೆ ಕೆಲಸ ಆರಂಭಿಸುವಂತೆ ಸೂಚಿಸಿದೆ. ಹುಣಸೂರಿನಲ್ಲಿ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಲು ತಂತ್ರಗಾರಿಕೆ ರೂಪಿಸಿದ್ದು, ಜಿ.ಟಿ.ದೇವೇಗೌಡರ ಜತೆ ಸಂಧಾನದ ಮಾತುಕತೆಯೂ ನಡೆದಿದೆ. ಅದು ಯಶಸ್ವಿಯಾದರೆ ಅವರ ಪುತ್ರ ಹರೀಶ್‌ಗೌಡ ಕಣಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಕೆ.ಆರ್.ಪುರ, ಶಿವಾಜಿನಗರ, ಅಥಣಿ, ಕಾಗವಾಡ, ಗೋಕಾಕ್, ವಿಜಯನಗರ, ಹಿರೇಕೆರೂರು, ರಾಣಿ ಬೆನ್ನೂರು, ಯಲ್ಲಾಪುರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಕೆಲವರು ಬಂಡಾಯ ಸಾರಬಹುದು ಎಂಬ ನಿರೀಕ್ಷೆಯಲ್ಲಿ ಜೆಡಿಎಸ್ ಕಾದು ಕುಳಿತಿದೆ.
ಸಮರ್ಥರ ಕೊರತೆ: ಹದಿನೈದು ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಕಣಕ್ಕೆ ಇಳಿಯುವುದಾಗಿ ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದು, ಅದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಪ್ಪಿದ್ದಾರೆ. ಆದರೆ, ಎಲ್ಲ ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಗಳು ಇಲ್ಲ. ಹೀಗಾಗಿ, ಕನಿಷ್ಠ ಹತ್ತು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯತ್ನ ನಡೆದಿದೆ.
ಬಿಜೆಪಿಯು ಏಳು ಕ್ಷೇತ್ರಗಳಿಗಿಂತ ಹೆಚ್ಚು ಗೆಲ್ಲದಂತೆ ನೋಡಿಕೊಂಡರೆ ಮಾತ್ರ ಪಕ್ಷಕ್ಕೆ ಭವಿಷ್ಯ. ಮತ್ತೂಮ್ಮೆ ಅಧಿಕಾರಕ್ಕೆ ಬರುವ ಅವಕಾಶ ಸಿಗಲಿದೆ. ಇದೇ ಕಾರಣಕ್ಕೆ ದೇವೇಗೌಡರು 2-3 ತಿಂಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂಬ ಮಾತನ್ನೂ ಆಡಿದ್ದಾರೆ. ಹೀಗಾಗಿ, ಉಪ ಚುನಾವಣೆ ಜೆಡಿಎಸ್‌ಗೆ ತಾನು ಗೆಲ್ಲುವ ಸಂಖ್ಯೆ ಗಿಂತ ಬಿಜೆಪಿ ಗೆಲ್ಲುವ ಸಂಖ್ಯೆ ಕಡಿಮೆಗೊಳಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.
ಕಾರ್ಯಕರ್ತರು-ಮುಖಂಡರ ಜಿಜ್ಞಾಸೆ: ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿ ಸರ್ಕಾರ ಉರುಳಿಸಲು ಬಿಡುವುದಿಲ್ಲ ಎಂದು ಹೇಳಿರುವುದು ಪಕ್ಷದ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಹೊಸ ಜಿಜ್ಞಾಸೆಗೆ ಕಾರಣವಾಗಿದೆ. ಉಪ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಕಾರ್ಯತಂತ್ರ ಏನಿರಬಹುದು? ಬಿಜೆಪಿ ವಿರುದ್ಧ ನಾವು ಹೋರಾಟ ಮಾಡಬೇಕಾ? ಕಾಂಗ್ರೆಸ್ ವಿರುದ್ಧವಾ ಎಂಬುದು ಸ್ಪಷ್ಟತೆ ಸಿಗುತ್ತಿಲ್ಲ. ಅಭ್ಯರ್ಥಿಗಳ ಆಯ್ಕೆ ನಂತರವಷ್ಟೇ ಇದಕ್ಕೆ ಉತ್ತರ ಸಿಗುವ ಸಾಧ್ಯತೆಯಿದೆ.
* ಎಸ್. ಲಕ್ಷ್ಮಿನಾರಾಯಣ