ಮಧುಗಿರಿ: ತಾಲೂಕಿನಲ್ಲಿ ನಡೆದ ನಾಡ ಪ್ರಭು ಕೆಂಪೇಗೌಡರ ರಥಯಾತ್ರೆಯಲ್ಲಿ ಜೆಡಿಎಸ್‌ನ ಭಿನ್ನಮತೀಯ ನಾಯಕರೆಲ್ಲ ಒಂದಾಗಿದ್ದು, ಬಡವನಹಳ್ಳಿಯಲ್ಲಿ ರಥಯಾತ್ರೆಯು ಜೆಡಿಎಸ್‌ನ ಜೈತ್ರ ಯಾತ್ರೆಯಾಗಿ ಪರಿಣಮಿಸಿದ್ದು, ಜೆಡಿಎಸ್‌ನ ಕಾರ್ಯಕರ್ತರೆಲ್ಲ ಹರ್ಷದಿಂದ ಕುಣಿದು ಕುಪ್ಪಳಿಸಿದರು.
ತಾಲೂಕಿನಲ್ಲಿ ಸರ್ಕಾರದ ವತಿಯಿಂದ ಕೆಂಪೇಗೌಡರ ಪುತ್ಥಳಿ ಅನಾವರಣಕ್ಕಾಗಿ ಮೃತ್ತಿಗೆ ಸಂಗ್ರಹ ಮಾಡಲು ಆಗಮಿಸಿದ್ದು, ಕಳೆದರೆಡು ದಿನಗಳಿಂದ ವಿವಿಧೆಡೆ ಸಂಚರಿಸಿ ಭಾನುವಾರ ಬಡವನಹಳ್ಳಿ ತಲುಪಿತ್ತು. ಇಲ್ಲಿಯವರೆಗೂ ಶಾಸಕ ಎಂ.ವಿ.ವೀರಭದ್ರಯ್ಯ ರಥವನ್ನು ಬರಮಾಡಿಕೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ನಂತರ ವಿವಿಧೆಡೆ ಹಲವಾರು ಬಾರಿ ಭೇಟಿ ನೀಡಿದ್ದು ಭಾನುವಾರದಂದು ದೊಡ್ಡೇರಿ ಯಲ್ಲಿ ಸೇರಿದ್ದ ಬೃಹತ್ ಜನಸಾಗರದಲ್ಲಿ ರಥಯಾತ್ರೆಯನ್ನು ಬರಮಾಡಿಕೊಂಡರು. ಇದೇ ವೇಳೆ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಯಂದೇ ಬಿಂಬಿಸಿದ್ದ ಕೆಎಎಸ್ ಅಧಿಕಾರಿ ಎಲ್ .ಸಿ.ನಾಗರಾಜು ಹಾಗೂ ಅವರ ಬೆಂಬಲಿಗರು, ಜೊತೆಯಾಗಿಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಇದನ್ನು ಊಹಿಸದ ಜೆಡಿಎಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದು ಒಂದಾದರೆ, ಜಯ ನಮ್ಮದೇ ಎಂದು ಘೋಷಣೆ ಕೂಗಿದ್ದು, ಇಬ್ಬರನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರೆಸಿದು,ª ಜೊತೆಯಾಗಿಯೇ ರಥಯಾತ್ರೆ ಯಲ್ಲಿ ಭಾಗವಹಿಸಿದರು.
ಇದೇ ವೇಳೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸ್ಥಳೀಯ ಅಭ್ಯರ್ಥಿ ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ (ಕೆಸಿಆರ್), ಬಿಜೆಪಿ ಟಿಕೆಟ್ ಆಕಾಂಕ್ಷಿ ಆಡಿಟರ್ ಮಧು, ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ ಕೂಡ ಜನಾಂಗದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಚ್ಚರಿಯೆಂಬಂತೆ ಮಾಜಿ ಶಾಸಕ ಕೆ.ಎನ್. ರಾಜಣ್ಣನವರ ಪುತ್ರ ಪರಿಷತ್ ಸದಸ್ಯ ಆರ್. ರಾಜೇಂದ್ರ ಕೂಡ ರಥಯಾತ್ರೆಯಲ್ಲಿ ಭಾಗವಹಿಸಿದ್ದು, ಕೆಂಪೇಗೌಡರ ರಥಯಾತ್ರೆಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಜನಾಂಗದ ಹಲವರು ಒಕ್ಕಲಿಗ ಜನಾಂಗದ ಅಧಿನಾಯಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭಾವಚಿತ್ರ ವಿಲ್ಲದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಒಗ್ಗಟ್ಟಾದ ಜೆಡಿಎಸ್? ರಥಯಾತ್ರೆಯಲ್ಲಿ ಜೆಡಿಎಸ್ ಭಿನ್ನಮತದ ನಾಯಕರು ಒಗ್ಗಟ್ಟಾಗಿದ್ದು, ಎಲ್ಲವೂ ಸರಿಯಾಗಿದೆ ಎಂಬ ಭಾವನೆಯಲ್ಲಿ ಕಾರ್ಯಕರ್ತರಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಬಡವನಹಳ್ಳಿಯಲ್ಲಿ ಇಬ್ಬರೂ ನಾಯಕರು ಹಾಗೂ ಬೆಂಬಲಿಗರು ಒಟ್ಟಾಗಿರುವುದು ಕಂಡು ಬಂದಿತು.
ಕೆಂಪೇಗೌಡರು ಹಿಂದಿನ ಬೆಂಗಳೂರಿನ ನಿರ್ಮಾತೃ. ದೇವೇಗೌಡರು ಆಧುನಿಕ ಬೆಂಗಳೂರಿನ ಕನಸು ಕಂಡ ಕನಸುಗಾರ. ಇವರ ದೂರದೃಷ್ಟಿಯ ಫಲವೇ ಫ್ಲೈ ಓವರ್ ರಸ್ತೆ, ಮೆಟ್ರೋ ಹಾಗೂ 4ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆ ಹಾಗೂ ನೂತನ ಕೈಗಾರಿಕಾ ನೀತಿಯಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಗೌಡರೇ ಕಾರಣ.
-ಎಂ.ವಿ.ವೀರಭದ್ರಯ್ಯ, ಶಾಸಕರು, ಮಧುಗಿರಿ