Advertisement

ರಾಜ್ಯದ ಹಿತಕ್ಕೆ ಮಾರಕವಾದ ಸಮರ್ಥ ನಾಯಕತ್ವ ಕೊರತೆ : ಎಚ್‌.ಡಿ.ಕುಮಾರಸ್ವಾಮಿ

04:55 PM Aug 25, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ:“ನೀರಾವರಿ ಯೋಜನೆಗಳೇ ಇರಲಿ, ಅಭಿವೃದ್ಧಿಯ ವಿಚಾರವೇ ಇರಲಿ ರಾಜ್ಯದ ಪಾಲಿಕೆಗೆ ಕೇಂದ್ರದ ನಿರ್ಲಕ್ಷ್ಯ, ಅನ್ಯಾಯದ ಪರ್ವ ಮುಂದುವರಿದಿದೆ. ಇದನ್ನು ಪ್ರಶ್ನಿಸುವುದಕ್ಕೆ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆ ಪರಿಹಾರ-ಸಮರ್ಥ ನಾಯಕತ್ವ ಎಂದರೆ ಪ್ರಾದೇಶಿಕ ಪಕ್ಷವಾಗಿದೆ. ಸಮರ್ಥ ನಾಯಕತ್ವ ಕೊರತೆ ನೀಗಿಸಲು ಜೆಡಿಎಸ್‌ ಸಜ್ಜಾಗಿದೆ. ರಾಜ್ಯದ ಸ್ವಾಭಿಮಾನ ಕಾಪಾಡುವ ಯತ್ನಕ್ಕೆ ಶಕ್ತಿ ತುಂಬುವಂತೆ ಜನರಿಗೆ ಮನವಿ ಮಾಡುತ್ತೇವೆ. ಟಾರ್ಗೆಟ್‌ 120-130 ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸುತ್ತೇವೆ.’

-ಇದು “ಉದಯವಾಣಿ’ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅನಿಸಿಕೆ. ಒಟ್ಟಾರೆ ಅವರು ಹೇಳಿದಿಷ್ಟು:

ಜೆಡಿಎಸ್‌ ಅನ್ನು ಹೀಯಾಳಿಸುವ, ಅವಮಾನಿಸುವ, ನೋಯಿಸುವ, ಈ ಪಕ್ಷದ ಕಥೆ ಮುಗಿದೇ ಹೋಯಿತೆಂದು ಅಪ್ರಪ್ರಚಾರ ಮಾಡುವ ಎಲ್ಲ ಯತ್ನಗಳು ನಡೆದಿವೆ, ಇಂದಿಗೂ ನಡೆಯುತ್ತಿವೆ. ಇವೆಲ್ಲಗಳನ್ನು ಮೆಟ್ಟಿಯೇ ಪಕ್ಷ ಇನ್ನೂ ಜೀವಂತವಾಗಿದೆ. ಜನರ ಮನದೊಳಗೆ ತನ್ನದೇ ಸ್ಥಾನ ಪಡೆದಿದೆ. ಹೀಗಾಗಿ ಎರಡು ರಾಷ್ಟ್ರೀಯ ಪಕ್ಷಗಳಿಂದ ಅನುಭವಿಸಿದ ನೋವು, ಸುಳ್ಳುಗಳ ಸರಮಾಲೆ, ಅನ್ಯಾಯದಿಂದ ಬೇಸತ್ತಿರುವ ರಾಜ್ಯದ ಜನತೆ ಮುಂದಿನ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಆಶೀರ್ವದಿಸುತ್ತಾರೆ ಎಂಬ ವಿಶ್ವಾಸ ತಮಗಿದೆ.

ನಾಯಕತ್ವದ ಅನಿವಾರ್ಯತೆ: ಇನ್ನು ನೀರಾವರಿ ಹಾಗೂ ಅಭಿವೃದ್ಧಿ ಯೋಜನೆಗಳ ವಿಚಾರದಲ್ಲಿ ನೆರೆಯ ರಾಜ್ಯಗಳಿಗೆ ದೊರೆಯುವಷ್ಟು ಪ್ರಾಶಸ್ತ್ಯ, ಪ್ರಾಧಾನ್ಯತೆ ಕರ್ನಾಟಕಕ್ಕೆ ದೊರೆಯುತ್ತಿಲ್ಲ. ಕಾವೇರಿ, ಕೃಷ್ಣಾ, ಮಹದಾಯಿ ನದಿಗಳ ನೀರಿನ ವಿಚಾರಗಳನ್ನೇ ತೆಗೆದುಕೊಳ್ಳಿ..ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳಿಗೆ ಸಿಕ್ಕ ಮನ್ನಣೆ-ಸೌಲಭ್ಯ ಕರ್ನಾಟಕಕ್ಕೆ ದೊರೆಯುತ್ತಿಲ್ಲ. ಯುಕೆಪಿ 3ನೇ ಹಂತ, ಮಹದಾಯಿ, ಕಳಸಾ-ಬಂಡೂರಿ, ಮೇಕೆದಾಟು, ಎತ್ತಿನ ಹೊಳೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯಕ್ಕೆ ಒಂದಿಲ್ಲೊಂದು ರೀತಿಯಲ್ಲಿ ನೆರೆಯ ರಾಜ್ಯಗಳು ಕಾಡುತ್ತಿವೆ. ಕೇಂದ್ರದಿಂದ ಅನ್ಯಾಯ ಮುಂದುವರಿಯುತ್ತಲೇ ಇದೆ. ಸಮರ್ಥ ಪ್ರಾದೇಶಿಕ ಪಕ್ಷವಿದ್ದರೆ, ರಾಜ್ಯದ ಹಿತ ಕಾಯಲು ಕೇಂದ್ರದ ಮೂಗು ಹಿಡಿದು ಕೇಳುವ ಛಾತಿ ಬರುತ್ತದೆ. ಆ ಕೆಲಸವನ್ನು ಸಮರ್ಥ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲು ಜೆಡಿಎಸ್‌ ಸಿದ್ಧವಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಂತಹ ರಾಜ್ಯಗಳಲ್ಲಿ ಅಲ್ಲಿನ ಜನತೆ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸುತ್ತಿರುವುದಕ್ಕೆ ಪ್ರಮುಖ ಕಾರಣ ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಹಿತ ಕಾಯಲು ಸಾಧ್ಯ ಎಂಬುದಾಗಿದೆ.

Advertisement

ರಾಷ್ಟ್ರೀಯ ಪಕ್ಷಗಳ ರಾಜ್ಯದ ನಾಯಕರು ಕೇಂದ್ರದ ವರಿಷ್ಠರ ಓಲೈಕೆ, ರಾಜ್ಯದ ಉಸ್ತುವಾರಿಗಳೊಂದಿಗೆ ಉತ್ತಮ ಬಾಂಧವ್ಯದ ವ್ಯವಹಾರ ಕುದುರಿಸಲು ನೋಡುತ್ತಾರೆ ವಿನಃ ರಾಜ್ಯ ಅಭಿವೃದ್ಧಿ-ಹಿತದ ಬಗ್ಗೆ ಗಟ್ಟಿಧ್ವನಿ ಮಾಡುವುದೇ ಇಲ್ಲ ಎಂಬುದಕ್ಕೆ ರಾಜ್ಯದ ಇಂದಿನ ಸ್ಥಿತಿಯೇ ಸಾಕ್ಷಿ. ರಾಜ್ಯ-ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಅಭಿವೃದ್ಧಿ ಸಾಧ್ಯ ಎಂಬ ವಾದ ಕರ್ನಾಟಕದಲ್ಲಿ ಮತ್ತೆ ಮತ್ತೆ ಸುಳ್ಳಾಗುತ್ತಿದೆ. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜನರಲ್ಲಿ ಗಂಭೀರ ಚಿಂತನೆ ನಡೆಯಬೇಕಿದೆ.

ಯುವಕರ ಪಡೆ ಕಟ್ಟುವೆ: ಜೆಡಿಎಸ್‌ ಪಕ್ಷ ನೀಡಿದ ವಾಗ್ಧಾನ ಈಡೇರಿಕೆ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರ ಮನೆ-ಮನಗಳಿಗೆ ಮನವರಿಕೆಗೆ ಯುವಪಡೆ ಸಜ್ಜುಗೊಳಿಸುತ್ತೇವೆ. ಹಿಂದಿನ ಚುನಾವಣೆ ವೇಳೆ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇನೆಂದು ಘೋಷಿಸಿದಾಗ ಅಧಿಕಾರಕ್ಕೆ ಬರುವುದಿಲ್ಲವೆಂಬ ಖಾತರಿಯೊಂದಿಗೆ ಸಾಧ್ಯವಾಗದ ಭರವಸೆ ನೀಡುತ್ತಾರೆಂದು ಟೀಕೆ ಮಾಡಿದ್ದರು. ಆದರೆ ಕಾಂಗ್ರೆಸ್‌ ಬೆಂಬಲದ ಆಡಳಿತದಲ್ಲಿ ಏನೆಲ್ಲ ಸಂಕಷ್ಟಗಳ ನಡುವೆಯೂ ರೈತರ ಸಾಲ ಮನ್ನಾ ಮಾಡಿ ತೋರಿಸಿದ್ದೇನೆ. ಸುಮಾರು 23-24 ಲಕ್ಷ ರೈತ ಕುಟುಂಬಗಳು ಪ್ರಯೋಜನ ಪಡೆದಿವೆ. ಸಾಲ ಮನ್ನಾ ಪ್ರಯೋಜನ ಪಡೆದ 23-24 ಲಕ್ಷ ಕುಟುಂಬಗಳ ರೈತರ ಹೆಸರು, ಸಂಪರ್ಕ ನನ್ನ ಬಳಿ ಇದೆ. ಪ್ರತಿ ಮನೆಗೂ ಪಕ್ಷದ ಯುವಪಡೆ ತೆರಳಿ ಸಾಲ ಮನ್ನಾ ಯೋಜನೆ ನೆನಪಿಸುತ್ತದೆ. ಪಕ್ಷಕ್ಕೆ ಆಶೀರ್ವದಿಸುವಂತೆ ಬೇಡಿಕೊಳ್ಳಲಿದೆ. 120 ಸ್ಥಾನಗಳೊಂದಿಗೆ ಪೂರ್ಣ ಬಹುಮತ ಜೆಡಿಎಸ್‌ ಗೆ ನೀಡಿದಲ್ಲಿ ರಾಜ್ಯದ ಹಿತ ಕಾಯುವ, ರೈತರ ಬದುಕು ಸುಧಾರಿಸುವ ಪ್ರಾಮಾಣಿಕ ಯತ್ನ ಮಾಡಿ ತೋರಿಸುತ್ತೇವೆ ಎಂಬುದನ್ನು ಸ್ಪಷ್ಟ ಹಾಗೂ ವಿಶ್ವಾಸಪೂರ್ಣ ಮನಸ್ಸಿನಿಂದ ಹೇಳುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next