ದೇವನಹಳ್ಳಿ: ರಾಜ್ಯದಲ್ಲಿ ನೀರಾವರಿ ಯೋಜನೆಗೆ ಆದ್ಯತೆ ನೀಡುವುದು ಜನತಾ ಜಲಧಾರೆಯ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಕಾಂಗ್ರೆಸ್, ಬಿಜೆಪಿ ಜನರ ಜೀವನದ ಜತೆ ಚೆಲ್ಲಾಟ ಆಡುತ್ತಿದೆಯೇ ಹೊರತು, ಸಾಮಾನ್ಯ ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿಲ್ಲ ಎಂದು ಶಾಸಕ ಎಲ್. ಎನ್. ನಾರಾಯಣಸ್ವಾಮಿ ಆರೋಪಿಸಿದರು.
ಪಟ್ಟಣದ ತಾಲೂಕು ಜೆಡಿಎಸ್ ಕಚೇರಿಯಲ್ಲಿ ಮೇ 13ರಂದು ನಡೆಯಲಿರುವ ಜನತಾ ಜಲಧಾರೆ ಸಮಾರೋಪ ಸಮಾರಂಭದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ, 184 ತಾಲೂಕುಗಳಲ್ಲಿ ಜನತಾ ಜಲಧಾರೆ ರಥ ಓಡಾಡಿತ್ತು. ಅಲ್ಲಿ ಸಂಗ್ರಹಿಸಿರುವ ನೀರನ್ನು ಪಕ್ಷದ ಕಚೇರಿ ಮುಂಭಾಗದಲ್ಲಿ ಪ್ರತಿದಿವಸವೂ ಪೂಜಾ ಕಾರ್ಯ ಮಾಡಿ 2023ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕ್ರಮ ರೂಪಿಸಿದೆ. ನೆಲಮಂಗಲದ ಬಳಿ ಸಮಾರೋಪ ಸಮಾರಂಭವಾಗುತ್ತಿದ್ದು, ವಾರಣಾಸಿಯಿಂದ ಸ್ವಾಮೀಜಿ ಕರೆಸಿ ಗಂಗಾರತಿ ಸಹ ಮಾಡಲಾಗುವುದು ಎಂದರು.
ಜೆಡಿಎಸ್ ಸಂಘಟನೆ: ಪ್ರತಿ ಗ್ರಾಮದಿಂದಲೂ ಹೆಚ್ಚಿನ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಇಡೀ ರಾಜ್ಯಾದ್ಯಂತ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ. 2023ರಲ್ಲಿ ಮತ್ತೆ ಕುಮಾರಸ್ವಾಮಿಯವರು ಸ್ಪಷ್ಟ ಬಹುಮತದೊಂದಿಗೆ ಮುಖ್ಯಮಂತ್ರಿ ಆಗಲಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಆಗುವುದಿಲ್ಲ. ಪ್ರಾದೇಶಿಕ ಪಕ್ಷಗಳಿಗೆ ಜನ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದ ಅವರು, ತಾಲೂಕಿನಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಪಕ್ಷವನ್ನು ಸಂಘಟನೆ ಮಾಡಲಾಗುತ್ತಿದೆ. ಮೇ 13ರಂದು ತಾಲೂಕಿನಿಂದ 7 ಸಾವಿರ ಸಂಖ್ಯೆಯಲ್ಲಿ ಜನತಾ ಜಲಧಾರೆ ಸಮಾರೋಪದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಜೆಡಿಎಸ್ ಸರ್ಕಾರ ಬಂದರೆ ಈಗಾಗಲೇ ಕುಮಾರಸ್ವಾಮಿ ಪಂಚ ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಹರಿಯುವ ಒಂದೊಂದು ಹನಿ ನೀರನ್ನು ಸದ್ಬಳಕೆ ಮಾಡಿಕೊಂಡಿದ್ದರೆ. ಇವತ್ತು ಇಡೀ ರಾಜ್ಯವೇ ಹಸಿರಿನಿಂದ ಕಂಗೊಳಿಸುತ್ತಿತ್ತು ಎಂದು ಹೇಳಿದರು.
ಆಕಾಂಕ್ಷಿಗಳ ಪಟ್ಟಿ ಸಂಗ್ರಹ: ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ ಮಾತನಾಡಿ, ಮೇ 22ರಂದು ತಾಲೂಕು ಸೊಸೈಟಿಗೆ ಚುನಾವಣೆ ನಡೆಯುತ್ತಿದ್ದು, ಯಾರು ಯಾರು ಆಕಾಂಕ್ಷಿಗಳಿದ್ದಾರೆ ಎಂಬ ಪಟ್ಟಿಯನ್ನು ಸಂಗ್ರಹಿಸಲಾಗುತ್ತಿದೆ. ಜೆಡಿಎಸ್ ಬೆಂಬಲಿತರೇ ತಾಲೂಕು ಸೊಸೈಟಿಯಲ್ಲಿ ಅಧಿಕಾರದ ಗದ್ದುಗೆಯಲ್ಲಿ ಇದ್ದೇವೆ. ಮತ್ತೆ ಜೆಡಿಎಸ್ ತಾಲೂಕು ಸೊಸೈಟಿಯಲ್ಲಿ ಅಧಿಕಾರ ನಡೆಸಲಿದೆ ಎಂದರು.
ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಕಲ್ಯಾಣ್ ಕುಮಾರ್ ಬಾಬು, ಗುರಪ್ಪ, ವಿ.ಹನುಮಂತಪ್ಪ, ನಾಗರಾಜ್, ಯರ್ತಿಗಾನಹಳ್ಳಿ ಶಿವಣ್ಣ, ಕೆ.ವಿ.ಮಂಜುನಾಥ್, ಲಕ್ಷ್ಮಣ್, ಮೀನಾಕ್ಷಿ, ಆರ್.ಭರತ್ ಕುಮಾರ್, ಟಿ.ರವಿ, ಸಾದಹಳ್ಳಿ ಎಸ್. ಮಹೇಶ್, ಗೋಪಾಲಸ್ವಾಮಿ, ನಾರಾಯಣಸ್ವಾಮಿ, ಮಂಡಿಬೆಲೆ ರಾಜಣ್ಣ, ಮುನಿರಾಜು, ಹುರುಳುಗುರ್ಕಿ ಶ್ರೀನಿವಾಸ್, ವೀರಪ್ಪ, ಚಂದ್ರೇಗೌಡ, ಚಿಕ್ಕನಾರಾಯಣಸ್ವಾಮಿ, ಮುನಿರಾಜು ಹಾಗೂ ಮತ್ತಿತರರು ಇದ್ದರು