ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗೋವಾದಿಂದ ಮಂಗಳವಾರ ಹಿಂತಿರುಗಿದ ಬಳಿಕ ಉಪಚುನಾವಣೆ ಸೋಲಿನ ಬಗ್ಗೆ ಜೆಡಿಎಸ್ ಆತ್ಮಾವಲೋಕನ ಸಭೆ ನಡೆಸಲಿದೆ. ವಾರಾಂತ್ಯದಲ್ಲಿ ನಡೆಯಲಿರುವ ಸಭೆಯಲ್ಲಿ 8-10 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಎದುರಾಗಲಿದೆ.
ಸೋಲಿನ ಕಹಿಯನ್ನು ಬದಿಗೊತ್ತಿ ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗದಿದ್ದರೆ ಕಷ್ಟ. ಅಲ್ಲದೆ, ಎರಡನೇ ಹಂತದ ನಾಯಕತ್ವವನ್ನು ಸಾಮಾಜಿಕ ನ್ಯಾಯದ ಆಧಾರದಲ್ಲಿ ಬೆಳೆಸಬೇಕಿದೆ. ಮುಂದಿನ ಮೂರೂವರೆ ವರ್ಷ ಪಕ್ಷ ಕಟ್ಟಲು ನಾಯಕರು ಮುಂದಾಗದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ ಎಂದು ಸಂದೇಶ ರವಾನಿಸುವ ಸಾಧ್ಯತೆಯೂ ಇದೆ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಕಟ್ಟಬೇಕು. ಎಲ್ಲ ಭಾಗದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯುವಕರಿಗೆ ಆದ್ಯತೆ ನೀಡಬೇಕು, ಹಳೆಯ ಮೈಸೂರು ಮಾತ್ರ ನೆಚ್ಚಿಕೊಂಡು ಕುಳಿತರೆ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವುದರ ಬಗ್ಗೆ ಸಭೆಯಲ್ಲಿ ವರಿಷ್ಠರ ಗಮನಸೆಳೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಕುಮಾರಸ್ವಾಮಿ ಅವರಿಗೇ ವಹಿಸಲು ಒತ್ತಡ ಹಾಕುವ ಸಾಧ್ಯತೆಯೂ ಇದೆ. ಸದ್ಯ ಪಕ್ಷದ ಅಧ್ಯಕ್ಷರಾಗಿರುವ ಎಚ್.ಕೆ. ಕುಮಾರಸ್ವಾಮಿ ಅವರು ಕೂಡ “ಎಲ್ಲ ನಾಯಕರು ತೀರ್ಮಾನ ಮಾಡಿ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷ ಮುನ್ನಡೆಸುವುದಾದರೆ ನನ್ನ ಅಭ್ಯಂತರವಿಲ್ಲ,
ನಾನು ರಾಜೀನಾಮೆ ನೀಡಲು ಸಿದ್ಧ’ ಎಂದು ದೇವೇಗೌಡರ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ, ಉಪ ಚುನಾವಣೆ ಸೋಲಿನ ಆತ್ಮಾವಲೋಕನ ಸಭೆ ನಿಗದಿಪಡಿಸಿ ಅಲ್ಲಿಯೇ ಒತ್ತಡ ಹೇರಲು ತೀರ್ಮಾನಿಸಲಾಗಿದ್ದು, ಕುಮಾರಸ್ವಾಮಿ ಅವರ ಸಮಯಕ್ಕಾಗಿ ಕಾಯಲಾಗುತ್ತಿದೆ ಎಂದು ಪಕ್ಷದ ನಾಯಕರು ತಿಳಿಸಿದರು.
60ನೇ ಜನ್ಮ ದಿನದ ಸಂಭ್ರಮ: ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸೋಮವಾರ 60ನೇ ಜನ್ಮ ದಿನದ ಸಂಭ್ರಮ. ಈ ಸಂಭ್ರಮವನ್ನು ಅವರು ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖೀಲ್ ಹಾಗೂ ಕುಟುಂಬದ ಸದಸ್ಯರ ಜತೆ ಗೋವಾದಲ್ಲೇ ಆಚರಿಸಿದರು. ನಾಯಕರು, ಅಭಿಮಾನಿಗಳು ಫೋನ್ ಮಾಡಿ ಕುಮಾರಸ್ವಾಮಿ ಅವರಿಗೆ ಶುಭ ಕೋರಿದರು.
ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ವಿಶ್ರಾಂತಿಗಾಗಿ ವೈದ್ಯರ ಸಲಹೆ ಮೇರೆಗೆ ಕಳೆದ ಮೂರು ದಿನಗಳಿಂದ ಕುಮಾರಸ್ವಾಮಿ, ಗೋವಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಹುಟ್ಟುಹಬ್ಬಕ್ಕೆ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಸಮಸ್ಯೆ ಆಗಬಹುದು ಎಂಬುದೂ ಗೋವಾದಲ್ಲಿ ಆಚರಣೆಗೆ ಮತ್ತೂಂದು ಕಾರಣ ಎನ್ನಲಾಗಿದೆ.