Advertisement
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಒಂದು ವರ್ಷದ ಮೊದಲೇ ಅಭ್ಯರ್ಥಿಯನ್ನಾಗಿ ಶಿವಶಂಕರ ಕಲ್ಲೂರ ಅವರನ್ನು ಜೆಡಿಎಸ್ ಘೋಷಣೆ ಮಾಡಿತ್ತು. ಕಲ್ಲೂರು ನಾಮಪತ್ರ ಸಲ್ಲಿಸಿ ಪ್ರಚಾರದಲ್ಲೂ ತೊಡಗಿದ್ದರು. ಮತದಾನ ಇನ್ನೇನು ಮೂರ್‍ನಾಲ್ಕು ದಿನ ಇದೆ ಎನ್ನುವಾಗಲೇ ವರಿಷ್ಠರು ಪಕ್ಷದ ಬೆಂಬಲ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಎಂದು ಘೋಷಿಸುವ ಮೂಲಕ, ಸ್ವತಃ ಪಕ್ಷದ ಅಭ್ಯರ್ಥಿಗೆ ಶಾಕ್ ನೀಡಿದ್ದಾರೆ.
Related Articles
Advertisement
ಪಕ್ಷದ ಅಭ್ಯರ್ಥಿಗೆ ನಿರೀಕ್ಷಿತ ಮಟ್ಟದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಸಾಧ್ಯವಾಗದಿರುವುದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅತ್ಯಂತ ಕಡಿಮೆ ಮತ ಪಡೆದರೆ ಉತ್ತರದಲ್ಲಿ ಪಕ್ಷಕ್ಕೆ ನೆಲೆ ಇಲ್ಲ ಎಂಬ ಅನಿಸಿಕೆಗೆ ಇನ್ನಷ್ಟು ಪುಷ್ಟಿ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಪಕ್ಷೇತರ ಅಭ್ಯರ್ಥಿ ಬೆಂಬಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕಲಿದ್ದು, ಇದು ಬಿಜೆಪಿಗೆ ಲಾಭ ತಂದುಕೊಡಬಲ್ಲದ್ದಾಗಿದೆ ಎಂಬುದು ಕೆಲವರ ಅನಿಸಿಕೆಯಾದರೂ, ಜೆಡಿಎಸ್ ಮೂಲಗಳು ಇದನ್ನು ಒಪ್ಪಲು ತಯಾರಿಲ್ಲ. ಬದಲಾಗಿ ಬಸವರಾಜ ಗುರಿಕಾರಗೆ ಗೆಲುವಾಗಲಿದೆ ನೋಡುತ್ತಿರಿ ಎನ್ನುತ್ತಿವೆ. ಹೀಗಾಗಿ ಕಾರ್ಯಕರ್ತರಲ್ಲಿ ಸಣ್ಣ ಅಸಮಾಧಾನ ಉಂಟಾಗಿದೆ.
ಹೊರಟ್ಟಿ ಮೂಲಕ ಮನವರಿಕ : ಶಿವಶಂಕರ ಕಲ್ಲೂರ ಅವರಿಗೆ ವಾಸ್ತವ ಸ್ಥಿತಿ ಹಾಗೂ ಯಾವ ಕಾರಣಕ್ಕೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಮುಂಚಿತವಾಗಿ ತಿಳಿಸದೆ, ನಿರ್ಣಯ ಕೈಗೊಂಡ ನಂತರದಲ್ಲಿ ಮನವೊಲಿಕೆ ಕಾರ್ಯ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಹೊರಟ್ಟಿ ಅವರ ಮೂಲಕ ಮನವರಿಕೆ ಕಾರ್ಯ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗುರಿಕಾರಗೆ ಬಲ : ಜೆಡಿಎಸ್ ನಾಯಕರು ಕೈಗೊಂಡ ನಿರ್ಧಾರದಿಂದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬಲ ಬಂದಂತಾಗಿದೆ. ಗುರಿಕಾರ ಅವರ ಬೆಂಬಲಿಗರೆಂದರೆ ಹೆಚ್ಚಿನವರು ಶಿಕ್ಷಕರು ಹಾಗೂ ನೌಕರರು. ಚುನಾವಣೆ ಪ್ರಚಾರದಲ್ಲಿ ಅವರು ಪಾಲ್ಗೊಳ್ಳಬಹುದೇ ವಿನಃ ಮತಗಟ್ಟೆ ಏಜೆಂಟರಾಗಲು ಬರುವುದಿಲ್ಲ. ಜೆಡಿಎಸ್ ಬೆಂಬಲದಿಂದಾಗಿ ಎಲ್ಲ ಮತಗಟ್ಟೆಗಳಿಗೂ ಏಜೆಂಟರು ಸುಲಭವಾಗಿ ಸಿಕ್ಕಂತಾಗಿದೆ ಎಂದು ಹೇಳಲಾಗುತ್ತಿದೆ.
-ಅಮರೇಗೌಡ ಗೋನವಾರ