Advertisement

ಕಾಂಗ್ರೆಸ್‌ಗೆ ಜೆಡಿಎಸ್‌ ಬೆಂಬಲ ನೀಡಿಲ್ಲ: ಕೃಷ್ಣಾ ರೆಡ್ಡಿ

10:29 AM Nov 16, 2021 | Team Udayavani |

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ ಬೆಂಬಲ ನೀಡಿಲ್ಲ. ನಾವು ಯಾವ ಪಕ್ಷದೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಕೃಷ್ಣಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ತಾವು ಕುಳಿತಲ್ಲೇ ತಮಗೆ ಜೆಡಿಎಸ್‌ ಬೆಂಬಲ ನೀಡಿರುವುದಾಗಿ ಘೋಷಿಸಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ನಾವು ಇದುವರೆಗೂ ಬೆಂಬಲವೂ ಸೂಚಿಸಿಲ್ಲ. ಯಾವ ಪಕ್ಷದ ಜತೆಗೂ ಮೈತ್ರಿ ಮಾಡಿಕೊಂಡಿಲ್ಲ, ಕಾಂಗ್ರೆಸ್‌ನವರಿಗೆ ಜೆಡಿಎಸ್‌ ಬೆಂಬಲ ಕೊಡುತ್ತದೆ ಎಂದು ಯಾರು ಮಾತು ಕೊಟ್ಟಿದ್ದಾರೆ ಗೊತ್ತಿಲ್ಲ. ಬಿಜೆಪಿಗೂ ನಾವು ಬೆಂಬಲ ನೀಡಿಲ್ಲ. ಸಂದರ್ಭ ಬಂದರೆ ವಿಪಕ್ಷದಲ್ಲಿ ಕೂರಲೂ ಜೆಡಿಎಸ್‌ ಸಿದ್ಧವಿದೆ. ಆದರೆ, ಅಡ್ಡದಾರಿ ಮೂಲಕ ಅಧಿಕಾರಕ್ಕೆ ಬಿಜೆಪಿ ಯತ್ನಿಸುತ್ತಿದೆ. ಇದನ್ನು ಅತಿ ಹೆಚ್ಚು ಸ್ಥಾನ ಗಳಿಸಿರುವ ಕಾಂಗ್ರೆಸ್‌ ತಡೆಯುವ ಕೆಲಸ ಮಾಡಲಿ ಎಂದರು.

ಮೇಯರ್‌ ಪಟ್ಟಕ್ಕೇರಲು ಯಾರಿಗೂ ಬಹುಮತವಿಲ್ಲ. ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಕ್ಕೂ ಜೆಡಿಎಸ್‌ ಬೆಂಬಲ ಬೇಕಾಗಿದೆ. ಆದರೆ, ಪಾಲಿಕೆಯ ಅಧಿಕಾರಕ್ಕೆ ಬರಲು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜಿಲ್ಲೆಗೆ ಸಂಬಂಧವಿರದ ಏಳು ಜನ ವಿಧಾನ ಪರಿಷತ್‌ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಬಿಜೆಪಿ ಸೇರ್ಪಡೆ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ವಿಧಾನ ಪರಿಷತ್‌ ಸದಸ್ಯರಾದ ಭಾರತಿ ಶೆಟ್ಟಿ, ಲೇಹರ್‌ ಸಿಂಗ್‌, ರಘುನಾಥ ಮಲ್ಕಾಪುರೆ, ಮುನಿರಾಜು, ಪ್ರತಾಪ್‌ ನಾಯಕ, ಸಾಯಿಬಣ್ಣ ತಳವಾರ ಮತ್ತು ಲಕ್ಷ್ಮಣ ಸವದಿ ಕಳೆದ ಆರು ತಿಂಗಳಿಂದ ಕಲಬುರಗಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿರುವುದಾಗಿ ಕರಾರು ಮಾಡಿದ್ದಾರೆ. ಅದು ಸಹ ಬಿಜೆಪಿ ಶಾಸಕರಿರುವ ದಕ್ಷಿಣ ಮತಕ್ಷೇತ್ರದಲ್ಲೇ ಎಲ್ಲ ವಿಧಾನ ಪರಿಷತ್‌ ಸದಸ್ಯರು ಬಾಡಿಗೆ ಮನೆ ಮಾಡಿದ್ದಾರೆ ಎಂದು ದಾಖಲೆ ಸೃಷ್ಟಿಸುತ್ತಿದ್ದಾರೆ. ಉತ್ತರ ಕ್ಷೇತ್ರದಲ್ಲಿ ಇವರಿಗೆ ಬಾಡಿಗೆ ಮನೆಗಳು ಸಿಗಲಿಲ್ವಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಸದ್ಬಳಕೆಯಾಗದ ದೇವರಾಜ ಅರಸ ಭವನ

Advertisement

ಲಕ್ಷ್ಮಣ ಸವದಿ ಅವರು ಬಿಜೆಪಿ ಸದಸ್ಯರ ಮನೆಯಲ್ಲೇ ಬಾಡಿಗೆ ಇದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ, ಇದರಿಂದ ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಇದನ್ನು ಜೆಡಿಎಸ್‌ ತೀವ್ರವಾಗಿ ವಿರೋಧಿಸುತ್ತದೆ. ಬಿಜೆಪಿ ತಡೆಯುವಲ್ಲಿ ಕಾಂಗ್ರೆಸ್‌ನ ಪಾತ್ರವೂ ಮುಖ್ಯವಾಗಿದೆ. ದಿ| ಖಮರುಲ್‌ ಇಸ್ಲಾಂ ಪ್ರತಿ ಬಾರಿಯೂ ಪಾಲಿಕೆಯಲ್ಲಿ ಬಿಗಿ ಹಿಡಿತ ಸಾಧಿಸುತ್ತಿದ್ದರು. ಅವರ ಗೌರವ ಉಳಿಸಿಕೊಂಡು ಹೋಗುವ ಹೊಣೆ ಕಾಂಗ್ರೆಸ್‌ ಮೇಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜು ಕುಲಕರ್ಣಿ, ಸಮದ್‌ ಸಿದ್ದಿಕ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next