ಗುಳೇದಗುಡ್ಡ : ಪೂಜ್ಯರನ್ನು ಕಳೆದುಕೊಂಡಿದ್ದು ನೋವು ತರಿಸಿತ್ತು. ಅವರ ಪುಣ್ಯಸ್ಮರಣೆದೊಂದಿಗೆ ಅವರ ಹಾಕಿಕೊಟ್ಟ ಸಂಸ್ಕಾರ ನಮ್ಮ ಜತೆಗೆ ಇರುತ್ತದೆ. ಶಾಂತಿ-ಸಮಾಧಾನ ಕಲಿಸಿಕೊಟ್ಟವರು ಕಾಡಸಿದ್ದೇಶ್ವರರು ಭಕ್ತರ ಏಳ್ಗೆಗಾಗಿ ಶ್ರಮಿಸಿದ ಶ್ರೀಗಳು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.
ಪಟ್ಟಣದ ಮರಡಿಮಠದ ಕಾಡಸಿದ್ದೇಶ್ವರ ಮಠದ 10ನೇ ಕಾಡಸಿದ್ದೇಶ್ವರ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗುರುಸಿದ್ದೇಶ್ವರ ಬ್ರಹನ್ಮಠದ ಬಸವರಾಜ ಪಟ್ಟದಾರ್ಯ ಶ್ರೀ ಮಾತನಾಡಿ, ಸರ್ವ ಧರ್ಮದವರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುತ್ತಿದ್ದರು. ಭಾವೈಕ್ಯತೆಯ ಶ್ರೀಗಳಾಗಿದ್ದರು. ಎಲ್ಲರಿಗೂ ಮೌನದಿಂದಲೇ ಸನ್ಮಾರ್ಗವನ್ನು ತೋರಿಸಿದ ಶ್ರೀಗಳು. ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಿಕೊಟ್ಟವರು. ಮೌನವಾಗಿದ್ದು ಆಧ್ಯಾತ್ಮಿಕ ಶಕ್ತಿ ಬೆಳೆಸಿಕೊಂಡಿದ್ದರು. ಇತರರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಧರ್ಮವನ್ನು ಅಳವಡಿಸಿಕೊಂಡವನು ಧರ್ಮಾತ್ಮನಾಗುತ್ತಾನೆ. ಪ್ರತಿಯೊಬ್ಬರು ಜಂಗಮ ಸೇವೆ, ದಾನ-ಧರ್ಮ ದಾಸೋಹ ಮಾಡಬೇಕು ಎಂದು ಹೇಳಿದರು.
ಕೋಟೆಕಲ್ ಹೊಳೆಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಸ್ವಾಮೀಜಿ, ಮುರುಘಾಮಠದ ಕಾಶಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಾಂಗ್ರೇಸ್ ಮುಖಂಡ ಭೀಮಸೇನ ಚಿಮ್ಮನಕಟ್ಟಿ, ಬಿಜೆಪಿ ಮುಖಂಡ ಮಹಾಂತೇಶ ಮಮದಾಪೂರ, ಜಂಗಮ ಸಮಾಜದ ಅಧ್ಯಕ್ಷ ಶಿವನಯ್ಯ ಮಳ್ಳಿಮಠ ಮಾತನಾಡಿದರು.
ಐದು ದಿನಗಳವರೆಗೆ ಪ್ರವಚನ ನಡೆಸಿಕೊಟ್ಟ ವಿವೇಕಾನಂದ ಶ್ರೀಗಳನ್ನು ಸನ್ಮಾನಿಸಲಾಯಿತು. ಶ್ರೀಮಠದ ಪೀಠಾಧ್ಯಕ್ಷ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ದೋಟಿಹಾಳ ಶ್ರೀಗಳು ಸಾನಿಧ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಹೊಳಬಸು ಶೆಟ್ಟರ, ಸಂಜಯ ಬರಗುಂಡಿ, ಎಂ.ಬಿ.ಹಂಗರಗಿ, ಪ್ರಶಾಂತ ಜವಳಿ, ವಿನೋದ ಮದ್ದಾನಿ, ಪ್ರಕಾಶ ಮುರಗೋಡ, ರಫೀಕ ಕಲಬುರ್ಗಿ, ಸಂತೋಷ ನಾಯನೇಗಲಿ, ಮುತ್ತಣ್ಣ ದೇವರಮನಿ, ಜವಳಿ, ವಿ.ಎಸ್.ಹಿರೇಮಠ ಸೇರಿದಂತೆ ಇತರರು ಇದ್ದರು.