Advertisement

ಜೆಡಿಎಸ್‌ ಅತೃಪ್ತ ಪರಿಷತ್‌ ಸದಸ್ಯರ ಸಭೆ; ಎಂಟು ಮಂದಿ ಹಾಜರ್

10:10 AM Nov 01, 2019 | Team Udayavani |

ಬೆಂಗಳೂರು:ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಶಿಫಾರಸು ಹಾಗೂ ಮನವಿಗಳಿಗೆ ಸ್ಪಂದಿಸಲಿಲ್ಲ ಎಂದು ಬೇಸರಗೊಂಡಿರುವ ವಿಧಾನಪರಿಷತ್‌ ಸದಸ್ಯರು ವಿಧಾನಸೌಧದಲ್ಲಿ ಸಭೆ ನಡೆಸಿದರು.

Advertisement

ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹದಿನೇಳು ಪರಿಷತ್‌ ಸದಸ್ಯರ ಪೈಕಿ ಎಂಟು ಮಂದಿ ಹಾಜರಿದ್ದರು. ದೇವೇಗೌಡರ ಕುಟುಂಬದ ಆಪ್ತ ತಿಪ್ಪೇಸ್ವಾಮಿಯವರು ಪಾಲ್ಗೊಂಡಿದ್ದು ಅಚ್ಚರಿ ಮೂಡಿಸಿದೆ.
ಟಿ.ಎ.ಶರವಣ, ಆಪ್ಪಾಜಿಗೌಡ, ತೂಪಲ್ಲಿ ಚೌಡರೆಡ್ಡಿ, ಮರಿತಿಬ್ಬೇಗೌಡ, ಶೀಕಂಠೇಗೌಡ, ಸಿ.ಆರ್‌.ಮನೋಹರ್‌ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು.

ಪಕ್ಷದ ನಾಯಕರು ಶಾಸಕರಂತೆಯೇ ಪರಿಷತ್‌ ಸದಸ್ಯರನ್ನೂ ಗೌರವದಿಂದ ನಡೆಸಿಕೊಳ್ಳಬೇಕು. ಪಕ್ಷ ಸಂಘಟನೆ ಸೇರಿ ಪ್ರಮುಖ ತೀರ್ಮಾನಗಳ ವಿಚಾರದಲ್ಲಿ ಚರ್ಚಿಸಬೇಕು. ಸಲಹೆ-ಸೂಚನೆ ಪಡೆಯಬೇಕು ಎಂದು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಗಮನಕ್ಕೂ ವಿಚಾರ ತಂದು ಪಕ್ಷದ ಸಂಘಟನೆಯಲ್ಲಿ ಪರಿಷತ್‌ ಸದಸ್ಯರನ್ನು ಕಡೆಗಣಿಸದಂತೆ ಹಾಗೂ ಹಿಂದೆ ಆಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಒಂದೊಮ್ಮೆ ಎಚ್‌.ಡಿ.ಕುಮಾರಸ್ವಾಮಿಯವರು ಮಲೇಷಿಯಾ ಪ್ರವಾಸಕ್ಕೆ ಕರೆದರೆ ಹೋಗದಿರಲು ಪರಿಷತ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದು ಹೇಳಲಾಗಿದೆ.

Advertisement

ಸಭೆಗೆ ಮುನ್ನ ಮಾತನಾಡಿದ ಟಿ.ಎ.ಶರವಣ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಪರಿಷತ್‌ ಸದಸ್ಯರ ಶಿಪಾರಸುಗಳಿಗೆ ಮಾನ್ಯತೆ ನೀಡಿಲ್ಲ ಎಂಬ ಅಸಮಾಧಾನವಿದೆ. ಆ ಬಗ್ಗೆ ಚರ್ಚಿಸಿ ಮುಂದೇನು ಮಾಡಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ಜೆಡಿಎಸ್‌ ಕಚೇರಿಯಲ್ಲಿ ಚಂಡಿಯಾ ಯಾಗ
ಈ ಮಧ್ಯೆ ಜೆಡಿಎಸ್‌ ಕಚೇರಿಯಲ್ಲಿ ಮಂಗಳವಾರ ರಾತ್ರಿ ಚಂಡಿಕಾ ಯಾಗ ನಡೆಸಿರುವುದು ಕುತೂಹಲ ಮೂಡಿಸಿದೆ. ಎಚ್‌.ಡಿ.ದೇವೇಗೌಡರ ಕುಟುಂಬ ಸದಸ್ಯರು ಪಾಲ್ಗೊಂಡಿದ್ದ ಈ ಪೂಜೆಗೆ ಪಕ್ಷದ ಇತರೆ ನಾಯಕರಿಗೆ ಪ್ರವೇಶ ಇರಲಿಲ್ಲ ಎಂದು ಹೇಳಲಾಗಿದೆ. ಅಮಾವ್ಯಾಸೆ ನಂತರ ಅಥವಾ ಮುಂಚೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಕಚೇರಿ ಅಥವಾ ಮನೆಯಲ್ಲಿ ಪೂಜೆ ಮಾಡುವುದು ಸಹಜ, ಶತ್ರು ಸಂಹಾರ ಹಾಗೂ ಅಭಿವೃದ್ಧಿಗಾಗಿ ಯಾಗ ನಡೆಸಲಾಗಿದೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next