Advertisement

ಕಲಬುರಗಿ ಮೇಯರ್ ಚುನಾವಣೆ: ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ಕೊಟ್ಟಿಲ್ಲ ಎಂದ ಮುಖಂಡ

01:33 PM Nov 15, 2021 | Team Udayavani |

ಕಲಬುರಗಿ: ಇಲ್ಲಿನ ಮಹಾನಗರ‌ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ನೀಡಿಲ್ಲ. ನಾವು ಯಾವ ಪಕ್ಷದೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಕೃಷ್ಣಾರೆಡ್ಡಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ತಾವು ಕುಳಿತಲ್ಲೇ ತಮಗೆ ಜೆಡಿಎಸ್ ಬೆಂಬಲ ನೀಡಿರುವುದಾಗಿ ಘೋಷಿಸಿ‌ಕೊಳ್ಳುತ್ತಿದ್ದಾರೆ‌. ಆದರೆ, ವಾಸ್ತವದಲ್ಲಿ ನಾವು ಇದುವರೆಗೂ ಬೆಂಬಲವೂ ಸೂಚಿಸಿಲ್ಲ. ಮೈತ್ರಿಯೂ ಮಾಡಿಕೊಂಡಿಲ್ಲ ಎಂದರು.

ಬಿಜೆಪಿಗೂ ನಾವು ಬೆಂಬಲ ನೀಡಿಲ್ಲ. ಸಂದರ್ಭ ಬಂದರೆ ವಿರೋಧ ಪಕ್ಷದಲ್ಲಿ ಕೂರಲೂ ಜೆಡಿಎಸ್ ಸಿದ್ಧವಿದೆ. ಆದರೆ, ಅಡ್ಡದಾರಿ ಮೂಲಕ ಅಧಿಕಾರಕ್ಕೆ ಬಿಜೆಪಿ ಯತ್ನಿಸುತ್ತಿದೆ‌. ಇದನ್ನು ಅತಿ ಹೆಚ್ಚು ಸ್ಥಾನ ಗಳಿಸಿರುವ ಕಾಂಗ್ರೆಸ್ ಪಕ್ಷ ತಡೆಯುವ ಕೆಲಸ‌ ಮಾಡಲಿ ಎಂದು ಸವಾಲು ಹಾಕಿದರು.

ಪಾಲಿಕೆಯ ಅಧಿಕಾರಕ್ಕೆ ಬರಲು ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮೇಯರ್ ಪಟ್ಟಕ್ಕೇರಲು ಯಾರಿಗೂ ಬಹುಮತವಿಲ್ಲ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಕ್ಕೂ ಜೆಡಿಎಸ್ ಬೆಂಬಲ ಬೇಕಾಗಿದೆ. ಆದರೆ, ಅಧಿಕಾರದ ದಾಹಕಾಗಿ ಬಿಜೆಪಿ ಜಿಲ್ಲೆಗೆ ಸಂಬಂಧವಿರದ ಏಳು ಜನ ವಿಧಾನ ಪರಿಷತ್ ಸದಸ್ಯರ ಹೆಸರು ಕಲಬುರಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುತ್ತಿದೆ ಎಂದು‌ ಕಿಡಿಕಾರಿದರು.

ಇದನ್ನೂ ಓದಿ:ಬಿಟ್ ಕಾಯಿನ್ ವಿಚಾರವನ್ನು ಕಾಂಗ್ರೆಸ್ ನವರು ಕೇವಲ ರಾಜಕೀಯಕ್ಕೆ ಬಳಸುತ್ತಿದ್ದಾರೆ: ಸಿಎಂ

Advertisement

ಅದು ಸಹ ಬಿಜೆಪಿ ಶಾಸಕರಿರುವ ದಕ್ಷಿಣ ಮತಕ್ಷೇತ್ರದಲ್ಲಿ ಎಲ್ಲ ಜನ ವಿಧಾನ ಪರಿಷತ್ ಸದಸ್ಯರು ಬಾಡಿಗೆ ಮನೆ ಮಾಡಿದ್ದಾರೆ ಎಂದು ದಾಖಲೆ ಸೃಷ್ಟಿಸುತ್ತಿದ್ದಾರೆ. ಏಕೆ ಉತ್ತರ ಕ್ಷೇತ್ರದಲ್ಲಿ ಅವರಿಗೆ ಬಾಡಿಗೆ ಮನೆಗಳು ಸಿಗಲಿಲ್ವಾ ಎಂದು ಪ್ರಶ್ನೆ ಮಾಡಿದ ಅವರು, ಲಕ್ಷಣ ಸವದಿ ಅವರು ಬಿಜೆಪಿ ಸದಸ್ಯರ ಮನೆಯಲ್ಲೇ ಬಾಡಿಗೆ ಇದ್ದಾರೆ ಅಂತೆ ಹೇಳಲಾಗುತ್ತಿದೆ. ಇದು ಹೇಗೆ ಸಾಧ್ಯ? ಇದು ಬಿಜೆಪಿಯ ‘420’ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಸದಸ್ಯರು ಬೆಂಗಳೂರಿಗೆ: ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಜೆಡಿಎಸ್ ಬೆಂಬಲ ಸೂಚಿಸಬೇಕೆಂಬಹುದು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಇದೇ ವೇಳೆ ಕೃಷ್ಣಾರೆಡ್ಡಿ ಸ್ಪಷ್ಟ ಪಡಿಸಿದರು.

ಸದ್ಯ ಜೆಡಿಎಸ್ ನ ನಾಲ್ವರು ಸದಸ್ಯರಿಗೆ ಬೆಂಗಳೂರಿಗೆ ಬರುವಂತೆ ಹೈಕಮಾಂಡ್ ನಿಂದ ಬುಲಾವ್ ಬಂದಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಲಬುರಗಿ ಪಾಲಿಕೆಯು 55 ಸದಸ್ಯರನ್ನು ಹೊಂದಿದ್ದು, ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸಹ ಸ್ಪಷ್ಟ ಬಹುಮತ ಬಂದಿಲ್ಲ. ಕಾಂಗ್ರೆಸ್ 27 ಸ್ಥಾನ ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 23 ಸ್ಥಾನಗಳನ್ನು ಗೆದ್ದಿದ್ದು, ಜತೆಗೆ ಓರ್ವ ಸ್ವತಂತ್ರ ಅಭ್ಯರ್ಥಿಯ ಬೆಂಬಲವನ್ನು ಹೊಂದಿದೆ. ನಾಲ್ಕು ಸ್ಥಾನಗಳನ್ನು ಗೆದ್ದಿರುವ ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ಆದರೆ, ವಿಧಾನ ಪರಿಷತ್ ಸದಸ್ಯರ ಬೆಂಬಲದ ಮೂಲಕ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸುತ್ತಿದೆ‌ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಆರೋಪವಾಗಿದೆ. ಇದೇ ನ.20ರಂದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next