ಸೇಡಂ: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ಅನೇಕ ವರ್ಗದವರಿಗೆ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಅದರಂತೆ ರೈತರಿಗೂ ಸಹ ಉಚಿತ ರಸಗೊಬ್ಬರ ಮತ್ತು ಬೀಜ ವಿತರಿಸುವಂತೆ ಜೆಡಿಎಸ್ ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಅವರ ದುಸ್ಥಿತಿ ಅರಿಯುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಪರಿಹಾರ ನೀಡುತ್ತಿಲ್ಲ. ಕಳೆದ ಬಾರಿಯ ಪ್ರಕೃತಿ ವಿಕೋಪದ ವೇಳೆ ಘೋಷಿಸಿದ ಪರಿಹಾರ ಇನ್ನೂ ಸಹ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಆರೋಪಿಸಿದರು.
ಗೊಂದಲದ ಹೇಳಿಕೆ ನೀಡುವುದನ್ನು ಸರ್ಕಾರ ನಿಲ್ಲಿಸಬೇಕು. ಜನರ ಕಷ್ಟವನ್ನು ಸರಿಯಾದ ಕ್ರಮದಲ್ಲಿ ಅರಿತು ಅವರ ನೆರವಿಗೆ ಬೆರಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಅವರು ಶಾರದಾ ಚಾರಿಟೇಬಲ್ ಟ್ರಸ್ಟ್, ಬಾಲರಾಜ ಬ್ರಿಗೇಡ್ ವತಿಯಿಂದ ಕ್ಷೇತ್ರದ ಜನತೆ ಹಿತದೃಷ್ಟಿಯಿಂದ ಉಚಿತ ಆಂಬ್ಯುಲೆನ್ಸ್ ಸೇವೆ, 150 ಹಳ್ಳಿಗಳಲ್ಲಿ ಸ್ಯಾನಿಟೈಸೇಷನ್, ವಿದ್ಯಾರ್ಥಿಗಳಿಗೆ ನೆರವು ನೀಡಿ ಕಷ್ಟಕಾಲದಲ್ಲಿ ಬೆಳಕಾಗಿದ್ದಾರೆ.
ಈಗ ಮಂಗಳವಾರ ತಾಲೂಕಿನ 50 ಸಾವಿರ ಜನರಿಗೆ ಉಚಿತ ದಿನಸಿ ಕಿಟ್ ನೀಡುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದರು. ಮುಖಂಡರಾದ ಗುರುಲಿಂಗಯ್ಯ ಸ್ವಾಮಿ ಹಿರೇಮಠ, ಸೂರ್ಯಪ್ರಕಾಶ ಕಾವಲಿ, ರಿಯಾಜ ಪಟೇಲ, ಎಂ.ಡಿ. ಪಟೇಲ, ದೇವೇಂದ್ರ ಹೆಗಡೆ, ನಾಗರೆಡ್ಡಿ ಮುಚಖೇಡ್, ಶರಣಪ್ಪ ಜಮಾದಾರ, ಹಾಲಿ ಚಾವುಸ್, ವಿಜಯ ಕುಮಾರ ಕುಲಕರ್ಣಿ, ಇಸ್ಮಾಯಿಲ್, ಸಮಾದ ಮನಿಯಾರ, ಅನಂತಯ್ಯ ತುನ್ನೂರ, ರಾಜೇಂದ್ರಸಿಂಗ, ನಾಗರಾಜ ಹಡಪದ, ಶರಣಪ್ಪ, ಏಸುರಾಜು ಇದ್ದರು.