ಗಜೇಂದ್ರಗಡ: ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಸಮಿಶ್ರ ಸರ್ಕಾರ ರಚನೆಯಾಗುವ ಹಿನ್ನಲೆಯಲ್ಲಿ ಪಟ್ಟಣದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಬಣ್ಣ ಎರಚಿ ಶನಿವಾರ ಕಾಲಕಾಲೇಶ್ವರ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ತಾಲೂಕಾಧ್ಯಕ್ಷ ಮಕ್ತುಂಸಾಬ ಮುಧೋಳ, ಈಗಾಗಲೇ ದೇಶಾದ್ಯಂತ ಕೋಮುವಾದ ಸೃಷ್ಟಿಸುತ್ತಿರುವ ಬಿಜೆಪಿಯನ್ನು ರಾಜ್ಯದಲ್ಲಿ ಬೆಳೆಯಲು ಬಿಡಬಾರದೆನ್ನುವ ಉದ್ದೇಶದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಸೇರಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿವೆ. ಇದು ಜಾತ್ಯತೀತ ಮನೋಭಾವದ ಎರಡು ಪಕ್ಷಗಳು ಕೈಗೊಂಡು ಮಹತ್ವದ ನಿರ್ಧಾರವಾಗಿದೆ ಎಂದರು.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗುವುದು ಅನಿವಾರ್ಯ. ಜನರ ಭಾವನೆಗಳ ಮಧ್ಯೆ ವಿಷ ಬೀಜ ಬಿತ್ತುವುದರ ಜತೆಗೆ ಪ್ರಜಾಪ್ರಭುತ್ವದ ವಿರುದ್ಧ ನಡೆದುಕೊಳ್ಳುವ ಬಿಜೆಪಿಗೆ ಬಹುಮತವಿಲ್ಲದಿದ್ದರೂ ಸಹ ಅ ಧಿಕಾರ ಹಿಡಿದು ಇದೀಗ ಮುಖಭಂಗ ಅನುಭವಿಸಿದ್ದಾರೆ. ಈಗಾಗಲೇ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಹತ್ತು ಹಲವು ಕನಸು ಕಂಡಿರುವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಬಳಿಕ 65 ವರ್ಷ ಹಿರಿಯ ಜೀವಿಗಳಿಗೆ ಪ್ರತಿಯೊಬ್ಬರಿಗೆ 5 ಸಾವಿರ ಗೌರವ ಧನ, 6 ತಿಂಗಳ ಗರ್ಭಿಣಿಯಿಂದ ಹಿಡಿದು ಮಗು ಜನಿಸಿದ 3 ತಿಂಗಳ ವರೆಗೆ ತಾಯಿ ಮತ್ತು ಮಗುವಿನ ರಕ್ಷಣೆಗಾಗಿ ಪ್ರತಿ ತಿಂಗಳು 6 ಸಾವಿರ ರೂ.ದಂತೆ 6 ತಿಂಗಳು ನೀಡಲಾಗುವುದು. ವಿಧವಾ, ಅಂಗವಿಕರಿಗೆ 2 ಸಾವಿರ ರೂ. ಮಾಸಾಶನ ಸೇರಿದಂತ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿ ದೇಶವೇ ಎದುರು ನೋಡುವಂತೆ ಸಮಿಶ್ರ ಸರ್ಕಾರ ಆಡಳಿತ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ರಾಜು ಸಾಂಗ್ಲಿಕಾರ ಮಾತನಾಡಿ, ಹಲವಾರು ರಾಜ್ಯಗಳಲ್ಲಿ ದಬ್ಟಾಳಿಕೆ ಆಡಳಿತ ನೀಡುತ್ತಿರುವ ಬಿಜೆಪಿ ರಾಜ್ಯದ ಗದ್ದುಗೆ ನೀಡಬಾರದೆನ್ನುವುದೇ ಕಾಂಗ್ರೆಸ್‌ನ ಮೂಲ ಮಂತ್ರವಾಗಿದೆ. ಬಹುಮತವಿಲ್ಲದಿದ್ದರೂ ಅಧಿಕಾರ ಹಿಡಿಯಬೇಕೆಂಬ ದುರಾಸೆಯಿಂದ ಬಿ.ಎಸ್. ಯಡಿಯೂರಪ್ಪನವರು 3 ದಿನ ಮುಖ್ಯಮಂತ್ರಿಯಾಗಿ ಇದೀಗ ಸುಪ್ರೀಂ ಕೋರ್ಟ್ ಆದೇಶದನ್ವಯ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಸಿಕ್ಕ ಗೆಲುವಾಗಿದೆ ಎಂದರು.
ಕಾಂಗ್ರೆಸ್-ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಲಾಗುವುದು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ ಯೋಜನೆಗಳ ಜತೆಗೆ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಎರಡು ಪಕ್ಷಗಳು ದುಡಿಯಲಿವೆ ಎಂದು ಹೇಳಿದರು. ವೀರೇಶ ಸಂಗಮದ, ಪಾಂಡಪ್ಪ ಚಿನ್ನಾರಾಠೊಡ, ಗಣೇಶ ರಾಜೂರ, ಬಸವರಾಜ ಸಂಚಾಲಿ, ಶರಣಯ್ಯ ಹಿರೇಮಠ, ಅನೀಲ ಕರ್ಣೆ, ಮೌಲಾಸಾಬ್ ಮುಧೋಳ, ಭಾಷಾಸಾಬ್ ಕರ್ನಾಚಿ, ಸೂಹೇಲ್ ಮುಧೋಳ, ಅಬ್ದುಲ್ ರೆಹಮಾನ್ ನದಿಮುಲ್ಲಾ ಇತರರು ಉಪಸ್ಥಿತರಿದ್ದರು.