Advertisement

ಸುಗಮ ಆಡಳಿತ ನಡೆಸಲು ಅವಕಾಶ ನೀಡಿ

12:30 AM Jan 31, 2019 | Team Udayavani |

ಬೆಂಗಳೂರು: ಕುಮಾರಸ್ವಾಮಿಯವರಿಗೆ ಕೆಟ್ಟ ಹೆಸರು ತರುವ ಯತ್ನ ನಡೆಯುತ್ತಿದೆ. ಕಾಂಗ್ರೆಸ್‌ ನಾಯಕರು ಬಾಯಿಗೆ ಬಂದಂತೆ ಮಾತನಾಡಿದರೆ ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ.

Advertisement

ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್‌ ರಾಷ್ಟ್ರೀಯ ಮಂಡಳಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾವು ನೋವು ನುಂಗಿಕೊಳ್ಳುತ್ತೇವೆ ಎಂದು ಹೇಗಾದರೂ ಮಾತನಾಡಬಾರದು. ಇತ್ತೀಚೆಗಿನ ಹೇಳಿಕೆಗಳು ನನಗೆ ತೀವ್ರ ಬೇಸರ ತರಿಸಿದೆ. ಕುಮಾರಸ್ವಾಮಿ ಮಾಡುತ್ತಿರುವ ಕೆಲಸಕ್ಕೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೂ ಪರೋಕ್ಷ ವಾಗ್ಧಾಳಿ ನಡೆಸಿದ ಅವರು, ‘ನೀವು ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದಿರಿ. ನಾನೇನಾದರೂ ಮಾತನಾಡಿದೆನಾ? ಒಂದು ಶಬ್ಧವನ್ನೂ ಮಾತನಾಡಲಿಲ್ಲ. ಅಕ್ರಮವೋ, ಸಕ್ರಮವೋ ಏನೂ ಮಾತಾಡಿಲ್ಲ. ಇದೀಗ ಕುಮಾರಸ್ವಾಮಿಯವರಿಗೆ ಆಡಳಿತ ನಡೆಸಲು ಅವಕಾಶ ಕೊಡದಿದ್ದರೆ ಹೇಗೆ?’ ಎಂದು ಪ್ರಶ್ನಿಸಿದರು.

ಧರ್ಮಸಿಂಗ್‌ ಸರ್ಕಾರದಲ್ಲಿ ಷರತ್ತು ಇರಲಿಲ್ಲ. ಅವರ ಸರ್ಕಾರ ಬೀಳ್ಳೋಕೆ ನಾನಗಲೀ, ಕುಮಾರಸ್ವಾಮಿಯಾಗಲೀ ಕಾರಣ ಅಲ್ಲ. ಇವತ್ತು ಕಾಂಗ್ರೆಸ್‌ ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ನೋವಾಗಿದ್ದಕ್ಕೆ ಮುಖ್ಯಮಂತ್ರಿ ಸ್ಥಾನ ಬಿಡಲು ರೆಡಿ ಎಂದಿದ್ದಾರೆ. ಕೇವಲ ಏಳು ತಿಂಗಳ ಸರ್ಕಾರ ಇದು. ಈಗಲೇ ಹೀಗಾದರೆ ಮುಂದೆ ಹೇಗೆ? ಎಂದರು.

ಕಾಂಗ್ರೆಸ್‌ ಶಾಸಕರಿಗೆ ಮುಖ್ಯಮಂತ್ರಿಯವರು ಸಿಗಲ್ಲವಂತೆ. ಹಾಗಂತ ನಿತ್ಯ ಹೇಳಿಕೆ ಕೊಡ್ತಾರೆ. ಒಂದು ನಿಗಮ ಬಿಟ್ಟರೆ ಉಳಿದೆಲ್ಲ ಸ್ಥಾನ ಕೊಟ್ಟಿದ್ದೇವೆ. ಇನ್ನೂ ಹೇಗೆ ಆಡಳಿತ ನಡೆಸಬೇಕು. ಎಷ್ಟು ದಿನ ಅಂತ ಹೀಗೆ ನಡೆದುಕೊಳ್ತೀರಿ. ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದೇವೆ. ಹೀಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ನಿಯಂತ್ರಣ ತಪ್ಪಿ ಹೋಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗುಮಾಸ್ತನಂತೆ ಕೆಲಸ ಮಾಡುತ್ತಿರುವೆ ಎಂದು ಕುಮಾರಸ್ವಾಮಿ ಹೇಳಿದ್ದು ನಿಜ. ಪಕ್ಷದೊಳಗೆ ನಮ್ಮದೇ ಶಾಸಕರ ಜತೆ ಮಾತನಾಡುವಾಗ ಬಾಯಿತಪ್ಪಿ ಹೇಳಿದ್ದು. ಅದನ್ನೇ ದೊಡ್ಡದು ಮಾಡಿದ್ರು ಎಂದು ಹೇಳಿದರು.

Advertisement

ಸಿದ್ದರಾಮಯ್ಯಗೆ ಪರೋಕ್ಷ ಟಾಂಗ್‌: ‘ನಾನು ಕುರುಬ ಸಮುದಾಯಕ್ಕೆ ಏನೂ ಮಾಡಲಿಲ್ಲ ಎಂದು ಮಾತನಾಡುವವರು ಹಿಂದಿನ ಘಟನಾವಳಿ ತಿಳಿದುಕೊಳ್ಳಬೇಕು. ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲೇ ಇದ್ದವರು. ರಾಜ್ಯಾಧ್ಯಕ್ಷರೂ ಆಗಿದ್ದರು. ಆಗ ಹೇಗೆ ಕೆಲಸ ಮಾಡಿದರು ಎಂಬುದು ಗೊತ್ತಿದೆ. ನಾನು ಪ್ರಧಾನಿಯಾಗಿ ದೆಹಲಿಗೆ ಹೋಗುವಾಗ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಆಗ ನಡೆದ ವಿಷಯವೇ ಬೇರೆ. ತಮ್ಮನ್ನು ಮುಖ್ಯಮಂತ್ರಿ ಮಾಡಬಹುದಿತ್ತು ಎಂದು ಸಿದ್ದರಾಮಯ್ಯ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಆಗ ನಾನು ಪಟ್ಟ ನೋವು ನನಗೆ ಗೊತ್ತು. ಆಗ ಏನಾಯಿತು ಎಂಬುದು ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾಗಾಂಧಿಯವರನ್ನೇ ಹೋಗಿ ಕೇಳಲಿ’ ಎಂದು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಆಲಿ, ಕಾರ್ಯಾಧ್ಯಕ್ಷ ಪಿ.ಜಿ.ಆರ್‌.ಸಿಂಧ್ಯಾ, ಕೇರಳ, ಮಹಾರಾಷ್ಟ್ರ, ಪಂಜಾಬ್‌ ರಾಜ್ಯಾಧ್ಯಕ್ಷರು, ಸಚಿವರು, ಶಾಸಕರು ಉಪಸ್ಥಿತರಿದ್ದರು.

ಗೌಡರ ತಾಕೀತು
ಸಮಾವೇಶದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಮಧ್ಯೆ, ಮಧ್ಯೆ ಎದ್ದು ಹೋಗುತ್ತಿದ್ದಾಗ ಮೈಕ್‌ ಪಡೆದು ಗದರಿಸಿದ ದೇವೇಗೌಡರು, ಕುಮಾರಸ್ವಾಮಿಯವರು ಸಭೆಗೆ ಬರಲಿದ್ದಾರೆ. ಸಂಜೆ ಆರು ಗಂಟೆಯಾದರೂ ಸರಿ, ಯಾರೂ ಕದಲಬಾರದು. ಸಭೆ ಮುಗಿಸಿಯೇ ಹೋಗಬೇಕು. ನಿಮ್ಮನ್ನೆಲ್ಲಾ ಬಸ್‌ ಹತ್ತಿಸಿಯೇ ನಾನು ಹೋಗುವುದು. ಮಧ್ಯಾಹ್ನ ಊಟ ಮಾಡಿ ಮತ್ತೆ ಬರಬೇಕು ಎಂದು ತಾಕೀತು ಮಾಡಿದರು.

ಲೋಕಸಭೆ ಚುನಾವಣೆ ಫ‌ಲಿತಾಂಶ ಜಾತ್ಯತೀತವಾಗಿರಬೇಕು. ಈ ನಿಟ್ಟಿನಲ್ಲಿ ನಾವೆಲ್ಲಾ ಕೆಲಸ ಮಾಡಬೇಕು. ಕೋಮುವಾದಿ ಪಕ್ಷಗಳ ವಿರುದ್ಧ ಹೋರಾಡಬೇಕು.
– ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

ಲೋಕಸಭೆ ಚುನಾವಣೆ ನಮ್ಮ ಮುಂದಿದೆ. 15 ರಿಂದ 17 ಸೀಟು ಗೆಲ್ಲಿಸಿಕೊಡಿ. ದೆಹಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತೆ ಅಂತ ದೇವೇಗೌಡರು ಹೇಳಿದ್ದಾರೆ. ನಾವು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು.
– ವೈ.ಎಸ್‌.ವಿ.ದತ್ತಾ, ಪ್ರಚಾರ ಸಮಿತಿ ಅಧ್ಯಕ್ಷ

ದೇವೇಗೌಡರು ಪಕ್ಷಕ್ಕಾಗಿ 10 ರಿಂದ 15 ಗಂಟೆ ಕೆಲಸ ಮಾಡುತ್ತಾರೆ.ನಾವು ಅದನ್ನು ನೋಡಿ 24 ಗಂಟೆಯೂ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಕೇವಲ ಟಿಕೆಟ್‌ ಬೇಡಿಕೆ ಇಡಲು ಬರಬಾರದು.
– ಬಸವರಾಜ ಹೊರಟ್ಟಿ, ಮಾಜಿ ಸಚಿವ

ನಿರ್ಣಯಗಳು
– ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಾಷ್ಟ್ರಮಟ್ಟದಲ್ಲಿ ನಾಯಕತ್ವ ವಹಿಸಿಕೊಳ್ಳಬೇಕು.
– ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡಬೇಕು.
– ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್‌ನ ಎರಡೂ ಸದನಗಳಲ್ಲಿ ಒಪ್ಪಿಗೆ ಪಡೆದು ಜಾರಿಗೊಳಿಸಬೇಕು.
– ದೇಶವು ಇಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅಪಾಯಕಾರಿ ಹಾಗೂ ಕೆಟ್ಟ ನೀತಿಗಳಿಂದ ರೈತರ ಆತ್ಮಹತ್ಯೆ, ದರ ಹೆಚ್ಚಳ, ನಿರುದ್ಯೋಗದಂತಹ ಸಮಸ್ಯೆಗಳು ಉದ್ಭವಿಸಿವೆ. ಇದಕ್ಕೆಲ್ಲಾ ಎನ್‌ಡಿಎ ಸರ್ಕಾರವೇ ಕಾರಣ.
– ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಿಬಿಐ,ಆರ್‌ಬಿಐ, ಸಿವಿಸಿ, ಇಡಿ, ಆದಾಯ ತೆರಿಗೆ ಇಲಾಖೆಗಳನ್ನು ದುರುಪಯೋಗಪಡಿಸಿ ಕೊಂಡು ತಮ್ಮ ರಹಸ್ಯ ಅಜೆಂಡಾ ಜಾರಿಗೆ ಯತ್ನಿಸುತ್ತಿದ್ದು, ಇದರ ವಿರುದ್ಧ ದೇಶಾದ್ಯಂತ ಜನಜಾಗೃತಿ ಮೂಡಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next