ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದರೂ ಮಂಡ್ಯ ಕ್ಷೇತ್ರದ ಕಾವು ಇನ್ನೂ ಮುಗಿದಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಆಯೋಜಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಜಿಲ್ಲೆ ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ಅಕ್ಷರಶಃ ಬೆಂಕಿಯಾಗಿದೆ. ಈ ಬೆಳವಣಿಗೆ ಕುರಿತಂತೆ ನೇರವಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಜೆಡಿಎಸ್ ನಾಯಕರು ದೂರು ನೀಡಿದ್ದಾರೆ.
ಅಚ್ಚರಿಯ ಬೆಳವಣಿಗೆಯಲ್ಲಿ ಸಚಿವ ಜಿ.ಟಿ.ದೇವೇಗೌಡರ ಮೈತ್ರಿ ಅಸಹಾಕಾರದ ಹೇಳಿಕೆ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ”ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ” ಎಂದಿದ್ದಾರೆ. ಜಿ.ಟಿ.ದೇವೇಗೌಡರ ಹೇಳಿಕೆ ನನ್ನಲ್ಲಿಯೂ ಅಚ್ಚರಿ ಮೂಡಿಸಿದೆ. ಅವರ ಮಾತುಗಳು ಸುಳ್ಳಾಗಲಿ ಎಂದು ಆಶಿಸುತ್ತೇನೆ. ಮೇ 23 ರ ಫಲಿತಾಂಶ ನಂತರವಷ್ಟೇ ಹೇಳಿಕೆಯ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಆಕ್ರೋಶ: ಮಂಡ್ಯದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕರು ಮೈತ್ರಿ ಧರ್ಮ ಪಾಲಿಸಿಲ್ಲ. ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಈಗ ಬಹಿರಂಗವಾಗಿರುವ ವಿಡಿಯೋ ಕ್ಲಿಪಿಂಗ್ ಸಾಕ್ಷಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮಳವಳ್ಳಿ ಶಿವಣ್ಣ ಸಹ ಅಲ್ಲಿ ಪಾಲ್ಗೊಂಡಿದ್ದಾರೆ ಎಂಬುದನ್ನು ಜೆಡಿಎಸ್ ನಾಯಕರು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ವಿಶ್ರಾಂತಿಯಲ್ಲಿರುವ ಸಿಎಂ ಕುಮಾರಸ್ವಾಮಿ ಅವರು ಈ ಬೆಳವಣಿಗೆ ಬಗ್ಗೆ ಅಸಮಾಧಾನಗೊಂಡಿದ್ದು, ಭೋಜನಕೂಟದ ವಿಡಿಯೋ ಕ್ಲಿಪಿಂಗ್ ಸಮೇತ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ನಾಯಕರ ಅಸಹಾಕಾರವನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಜೆಡಿಎಸ್ ತಯಾರಿ ನಡೆಸಿದೆ ಎಂಬ ಮಾತುಗಳು ಕೇಳಿಬಂದಿವೆ.
ಸಭೆ ಬಗ್ಗೆ ಮಾಹಿತಿ ಇಲ್ಲ: ಮಂಡ್ಯ ಕಾಂಗ್ರೆಸ್ ನಾಯಕರು ಸುಮಲತಾ ಅಂಬರೀಷ್ ಅವರ ಜತೆ ಸಭೆ ನಡೆಸಿದ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಬಗ್ಗೆ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ ಬಳಿ ವಿಚಾರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾಕೆ ಸಭೆ ಮಾಡಿದರು ಎಂಬುದು ಗೊತ್ತಿಲ್ಲ. ಸಭೆ ಮಾಡಿದಾಕ್ಷಣ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಅರ್ಥವಲ್ಲ. ಅಂತೆ-ಕಂತೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಕೂಡ ಕ್ರಮ ತೆಗೆದುಕೊಳ್ಳಲಿ
ಮಂಡ್ಯ ಮತ್ತು ಮೈಸೂರಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮೈತ್ರಿ ಧರ್ಮ ಯಶಸ್ವಿಯಾಗಿಲ್ಲ. ಇದಕ್ಕೆ ಬೇರೆ ಬೇರೆ ಕಾರಣಗಳೂ ಇವೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ನಮ್ಮವರು ಮೈತ್ರಿ ಧರ್ಮ ಪಾಲನೆ ಮಾಡಿಲ್ಲ ಎಂದಾದರೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ, ಕೋಲಾರ ಸೇರಿ ಕೆಲವು ಕಡೆಗಳಲ್ಲಿ ಜೆಡಿಎಸ್ ನಾಯಕರು ಬೆಂಬಲ ಕೊಟ್ಟಿಲ್ಲ. ಅವರೂ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿದರು