ಹುಬ್ಬಳ್ಳಿ: “ರಾಜ್ಯದಲ್ಲಿ ರೈತರು ಬರದಿಂದ ಸಂಕಷ್ಟದಲ್ಲಿದ್ದಾರೆ. ಇವರ ಬಗ್ಗೆ ಕಣ್ಣೀರು ಹಾಕಬೇಕಾದ ಸಚಿವ ಡಿ.ಕೆ. ಶಿವಕುಮಾರ್ ಅವರು ಕುಂದಗೋಳ ಕ್ಷೇತ್ರದಲ್ಲಿ ಸೋಲುವುದು ಖಚಿತ ಎನ್ನುವ ಕಾರಣಕ್ಕಾಗಿ ಕಣ್ಣೀರು ಹಾಕಿದ್ದಾರೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಹುಬ್ಬಳ್ಳಿ ತಾಲೂಕು ಚನ್ನಾಪುರ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, “ಡಿ.ಕೆ.ಶಿವಕುಮಾರ್ ಮೊದಲು ಅಳುತ್ತಿರಲಿಲ್ಲ. ದಾದಾಗಿರಿ ಮಾಡಿಕೊಂಡು ಓಡಾಡುತ್ತಿದ್ದರು. ಇದೀಗ ಜೆಡಿಎಸ್‌ನವರ ಸಹವಾಸ ದೋಷದಿಂದ ಅಳುವುದನ್ನು ಕಲಿತಿದ್ದಾರೆ’ ಎಂದರು.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಆದಿಯಾಗಿ ಸಿಎಂ ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಕಣ್ಣೀರು ಹಾಕಿದ್ದರು. ಇದೀಗ ಶಿವಕುಮಾರ ಕಣ್ಣೀರು ಹಾಕುವ ಡ್ರಾಮಾ ಮಾಡುತ್ತಿದ್ದಾರೆ. ಇಂತಹ ನಾಟಕಗಳು ಇಲ್ಲಿ ನಡೆಯುವುದಿಲ್ಲ. ಬಿಜೆಪಿ ಕಾರ್ಯಕರ್ತರು ಖರೀದಿ ವಸ್ತುವಲ್ಲ. ಮೊದಲು ನಿಮ್ಮ ನಾಟಕ ಬಂದ್ ಮಾಡಿ. ಇಂತಹ ನಾಟಕಗಳನ್ನು ರಾಮನಗರ, ಕನಕಪುರದಲ್ಲಿ ಇಟ್ಟುಕೊಳ್ಳಿ ಎಂದರು.
ಮೈತ್ರಿ ಸರ್ಕಾರವನ್ನು ಕಿತ್ತೂಗೆಯಲು ಸಿದ್ದರಾಮಯ್ಯ ತುದಿಗಾಲಲ್ಲಿ ನಿಂತಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಕ್ಷೇತ್ರದ ಜನತೆ ಡಿಕೆಶಿ ಗಂಟಿಗೆ ಮಾರು ಹೋಗಬಾರದು. ದುಡ್ಡು ಹಂಚಿ ಹೋಗುವ ಡಿಕೆಶಿ ಮತ್ತೆ ನಿಮ್ಮ ಕೈಗೆ ಸಿಗುವುದಿಲ್ಲ.
-ಪ್ರಹ್ಲಾದ ಜೋಶಿ, ಸಂಸದ