Advertisement

ಜಮೀರ್‌ಗೆ ಸಮನಾದ ಪೈಲ್ವಾನ್‌ ಹುಡುಕಿದ್ದೀನಿ

06:10 AM Apr 02, 2018 | |

ಪಾಂಡವಪುರ (ಮಂಡ್ಯ): “ಜಮೀರ್‌ಗೆ ಸರಿಸಮನಾದ ಪೈಲ್ವಾನ್‌ನೊಬ್ಬನನ್ನು ಹುಡುಕಿದ್ದೇನೆ. ಅವರ ಕ್ಷೇತ್ರದಲ್ಲೇ ಸರಿಸಮನಾದ ನಾಯಕನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಾಳೆ ಹೋಗುತ್ತಿದ್ದೇನೆ’ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.

Advertisement

ನಗರದಲ್ಲಿ ಭಾನುವಾರ ನಡೆದ ರೈತ ಚೈತನ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. “ನಮ್ಮ ಪಕ್ಷ ಬಿಟ್ಟುಹೋದ ಮಹಾನ್‌ ನಾಯಕರು ಕಾಂಗ್ರೆಸ್‌ ಸೇರಿದ್ದು, ನನ್ನನ್ನು ಎದುರಿಸುವವರು ಯಾರೂ ಇಲ್ಲ ಎಂದು ಮೆರೆಯುತ್ತಿದ್ದಾರೆ. ಅವರಿಗೆ ಸರಿಸಮನಾದ ನಾಯಕನನ್ನು ಹುಟ್ಟಿಹಾಕುವ ಸಾಮರ್ಥ್ಯ ನನಗಿದೆ. ಅವರು ಯಾರು ಎನ್ನುವುದನ್ನು ನಾನು ಈಗಲೇ ಹೇಳುವುದಿಲ್ಲ. ನಾನು ನಾಳೆ ಕ್ಷೇತ್ರಕ್ಕೆ ಹೋಗಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತೇನೆ. ಆಗ ಅದು ಎಲ್ಲರಿಗೂ ತಿಳಿಯಲಿದೆ’ ಎಂದು ತಿಳಿಸಿದರು.

ಸಿಎಂ ಹೇಳಿಸಿದ್ದು: ಜೆಡಿಎಸ್‌ನ್ನು ಬಿಜೆಪಿಯ “ಬಿ’ ಟೀಂ ಎಂದು ರಾಹುಲ್‌ ಹೇಳಿದರು. ಅದು ರಾಹುಲ್‌ ಬಾಯಿಂದ ಬಂದ ಮಾತಲ್ಲ. ಸಿದ್ದರಾಮಯ್ಯ ಹೇಳಿಸಿದ ಮಾತು. ಡಿ.ಕೆ.ಶಿವಕುಮಾರ್‌ ಕೈಲಿ ಚೀಟಿ ಕೊಟ್ಟು ರಾಹುಲ್‌ ಮೂಲಕ ಹೇಳಿಸಿದರು. ಹಿಂದೆ ಅವರು ಉಪಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರು ಯಾವ ಟೀಂನಲ್ಲಿದ್ದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಜೆಡಿಎಸ್‌ನಲ್ಲೇ ಬೆಳೆದು ಇಲ್ಲೇ ಅಧಿಕಾರ ಉಂಡು ಜೆಡಿಎಸ್‌ನ್ನೇ ಸರ್ವನಾಶ ಮಾಡುತ್ತೇನೆಂದು ಹೇಳುವ ಇವರಿಗೆ ಆತ್ಮಸಾಕ್ಷಿ ಎನ್ನುವುದೇ ಇಲ್ಲ. ಪಕ್ಷವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ, ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವುದನ್ನು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಆಗುವುದಿಲ್ಲ’ ಎಂದು ಖಡಕ್ಕಾಗಿ ಹೇಳಿದರು.

ಜಿಲ್ಲೆಯಲ್ಲಿ ಪುಟ್ಟರಾಜುಗೆ ನಾಯಕತ್ವ ನೀಡುವ ಸಲುವಾಗಿ ವಿಧಾನಸಭೆಗೆ ಕರೆ ತರುತ್ತಿದ್ದೇನೆ. ಪುಟ್ಟರಾಜು ಬೆಳೆಯುವುದು ಚೆಲುವರಾಯಸ್ವಾಮಿಗೆ ಇಷ್ಟವಿರಲಿಲ್ಲ. ಅವರನ್ನು ರಾಜಕೀಯವಾಗಿ ತುಳಿಯಲು ಯತ್ನಿಸಿದರು ಎಂದು ಆರೋಪಿಸಿದರು.

ಜೆಡಿಎಸ್‌ಗೆ ಮತ ನೀಡಿದರೆ ವ್ಯರ್ಥವಾಗುತ್ತೆ ಅನ್ನೋ ಅಮಿತ್‌ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ, ಅಮಿತ್‌ ಶಾ ತಂತ್ರಗಾರಿಕೆ ಕರ್ನಾಟಕದಲ್ಲಿ ನಡೆಯೋದಿಲ್ಲ. ಯಾರಿಗೆ ಮತ ಕೊಟ್ಟರೆ ಒಳ್ಳೆಯದು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಅದನ್ನು ನಿರ್ಧಾರ ಮಾಡುವವರು ಜನರೇ ಹೊರತು ಅಮಿತ್‌ ಶಾ ಅಲ್ಲ ಎಂದು ತಿರುಗೇಟು ನೀಡಿದರು.

Advertisement

ಹಾಲಪ್ಪ ಜೆಡಿಎಸ್‌ ಸೇರ್ಪಡೆ ನನಗೆ ಗೊತ್ತಿಲ್ಲ: “ಬಿಜೆಪಿಯ ಹರತಾಳು ಹಾಲಪ್ಪನವರ ಜೆಡಿಎಸ್‌ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ. ಸೇರ್ಪಡೆ ವಿಚಾರವಾಗಿ ಯಾವುದೇ ಮಾತುಕತೆ ನಡೆದಿಲ್ಲ. ನಾನು ಊಹಾಪೋಹದ ಮೇಲೆ ಎಂದಿಗೂ ಮಾತನಾಡುವುದಿಲ್ಲ. ಅವರಾಗಿಯೇ ಬಂದು ಪಕ್ಷ ಸೇರ್ಪಡೆ ಕುರಿತು ಮಾತನಾಡಿದರೆ ಅದನ್ನು ಕುಮಾರಸ್ವಾಮಿ ನಿರ್ಣಯಿಸುತ್ತಾರೆ’ ಎಂದರು.

ಅಲ್ತಾಫ್ ಖಾನ್‌ ಇಂದು ಜೆಡಿಎಸ್‌ಗೆ ಜಮೀರ್‌ ಅಹಮದ್‌ ವಿರುದ್ಧ ಸ್ಪರ್ಧೆ
ಬೆಂಗಳೂರು:
ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್‌ ಅಹಮದ್‌ ಅವರ ವಿರುದ್ಧ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಜೆಡಿಎಸ್‌, ಕಾಂಗ್ರೆಸ್‌ ಮುಖಂಡ ಅಲ್ತಾಫ್ ಖಾನ್‌ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಾಮರಾಜಪೇಟೆ ಕ್ಷೇತ್ರದಿಂದ ಅಲ್ತಾಫ್ಖಾನ್‌ಗೆ ಟಿಕೆಟ್‌ ನೀಡುವುದು ಖಚಿತವಾಗಿದ್ದು, ಸೋಮವಾರ ಜೆಡಿಎಸ್‌ ಕಚೇರಿಯಲ್ಲಿ ಅಲ್ತಾಫ್ಖಾನ್‌ ಬೆಂಬಲಿಗರೊಂದಿಗೆ ಜೆಡಿಎಸ್‌ ಸೇರ್ಪಡೆಯಾಗಲಿದ್ದಾರೆ.

ಅಲ್ತಾಫ್ ಖಾನ್‌ ಅವರ ಪತ್ನಿ ಸೀಮಾ ಪ್ರಸ್ತುತ ಜಗಜೀವನರಾಂ ನಗರ ವಾರ್ಡ್‌ನ ಕಾಂಗ್ರೆಸ್‌ ಪಾಲಿಕೆ ಸದಸ್ಯೆಯಾಗಿದ್ದಾರೆ. ಪಾದರಾಯನಪುರ ವಾರ್ಡ್‌ನ ಇಮ್ರಾನ್‌ ಪಾಶಾ ಅವರಿಗೆ  ಈ ಬಾರಿ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಟಿಕೆಟ್‌ ದೊರೆಯಲಿದೆ ಎಂದು ಹೇಳಲಾಗುತ್ತಿದ್ದಾದರೂ ಇದೀಗ ಅಲ್ತಾಫ್ಖಾನ್‌ ಅವರಿಗೆ ಟಿಕೆಟ್‌ ಕೊಡುವ ಭರವಸೆ ನೀಡಲಾಗಿದೆ. ಆದರೆ, ಈ ಬೆಳವಣಿಗೆಯಿಂದ ಚಾಮರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಜೆಡಿಎಸ್‌ ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ ಅಸಮಾಧಾನಗೊಂಡಿದ್ದಾರೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next