ಬೆಂಗಳೂರು: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಳೆದ ಫೆಬ್ರವರಿಯಲ್ಲಿ 126 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಜೆಡಿಎಸ್ ಎರಡನೇ ಪಟ್ಟಿ ಪ್ರಕಟಿಸಲು ವಿಳಂಬ ಮಾಡುತ್ತಿದ್ದು, ಸೌರಮಾನ ಯುಗಾದಿ ನಂತರವೇ ( ಏ. 14) ಪಟ್ಟಿ ಬಿಡುಗಡೆಯಾಗಲಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ವಿಕಾಸ ಯಾತ್ರೆ ಮೂಲಕ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ. ಏ. 13ರಂದು ವಿಕಾಸ ಯಾತ್ರೆ ಕೊನೆಗೊಳ್ಳಲಿದ್ದು, ನಂತರ ಚರ್ಚಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಫೆಬ್ರವರಿ 18ರಂದೇ 126 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಿತ್ತು. ಈ ಪೈಕಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಮುದ್ದೇಬಿಹಾಳದ ಅಭ್ಯರ್ಥಿ ಎ.ಎಸ್.ಪಾಟೀಲ್ ನಡಹಳ್ಳಿ ಮತ್ತೆ ಪಕ್ಷ ತೊರೆದು ಬಿಜೆಪಿ ಸೇರಿದ್ದರಿಂದ ಪ್ರಸ್ತುತ 125 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದಾದ ಬಳಿಕ ಯುಗಾದಿ ವೇಳೆಗೆ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.
ಆದರೆ, ನಂತರದಲ್ಲಿ ಅವರು ರಾಜ್ಯಾದ್ಯಂತ ವಿಕಾಸ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜತೆ ಹೊಂದಾಣಿಕೆ ಮಾಡಿಕೊಂಡ ಜೆಡಿಎಸ್, ಆ ಪಕ್ಷಕ್ಕೆ ಸುಮಾರು 20 ಕ್ಷೇತ್ರಗಳನ್ನು ಬಿಟ್ಟುಕೊಡಲು ನಿರ್ಧರಿಸಿತ್ತು. ಈಗಾಗಲೇ ಈ ಕ್ಷೇತ್ರಗಳು ಅಂತಿಮಗೊಂಡಿದೆಯಾದರೂ ಇನ್ನು ಸುಮಾರು 75 ಅಭ್ಯರ್ಥಿಗಳನ್ನು ಜೆಡಿಎಸ್ ಘೋಷಿಸಬೇಕಾಗಿದೆ.
ಹಾಲಿ ಶಾಸಕರು ಸೇರಿದಂತೆ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಎರಡನೇ ಹಂತದ ಪಟ್ಟಿ ಬಹುತೇಕ ಸಿದ್ಧವಾಗಿದ್ದು, ಕುಮಾರಸ್ವಾಮಿ ಅವರು ವಿಕಾಸ ಯಾತ್ರೆ ಮುಗಿಸಿಕೊಂಡು ಬಂದ ಕೂಡಲೇ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಚರ್ಚಿಸಿ ಬಿಡುಗಡೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾದು ನೋಡುವ ತಂತ್ರ:
ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಜೆಡಿಎಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕ ಅಸಮಾಧಾನಗೊಂಡ ಆ ಪಕ್ಷದವರು ಜೆಡಿಎಸ್‌ನಿಂದ ಸ್ಪರ್ಧಿಸಲು ಮುಂದಾದರೆ ಅಂಥವರಿಗೆ ಅವಕಾಶ ನೀಡಲು ನಿರ್ಧರಿಸಿದೆ. ಈ ಕಾರಣಕ್ಕಾಗಿಯೇ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಎರಡನೇ ಪಟ್ಟಿ ವೇಳೆ ಅನ್ಯ ಪಕ್ಷಗಳಿಂದ ಬರುವವರ ಕುರಿತು ಸ್ಪಷ್ಟತೆ ಸಿಗದೇ ಇದ್ದಲ್ಲಿ ಮೂರನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳೂ ಇವೆ ಎಂದು ಮೂಲಗಳು ತಿಳಿಸಿವೆ.