ಮೈಸೂರು : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಮಾಜಿ ಶಾಸಕ ಚಿಕ್ಕಣ್ಣ ಹಾಗು ಪುತ್ರ ಜಯಪ್ರಕಾಶ್ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಮೈಸೂರಿನ ಜಯಲಕ್ಷ್ಮೀ ಪುರಂನಲ್ಲಿರುವ ಶ್ರೀನಿವಾಸಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿದ, ಹೆಚ್. ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಜಯಪ್ರಕಾಶ್ ಅವರು ಭೇಟಿ ನೀಡಿದರು.
ಈ ಕುರಿತು ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿಕೆ ನೀಡಿ, ಚಿಕ್ಕಣ್ಣ ಮತ್ತು ಅವರ ಪುತ್ರ ನಮ್ಮ ಮನೆಗೆ ಆಗಮಿಸಿದ್ದು ಸೌಜನ್ಯದ ಭೇಟಿಯಷ್ಟೇ. ಚಿಕ್ಕಣ್ಣನವರ ಪುತ್ರ ಜಯಪ್ರಕಾಶ್ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಆಶೀರ್ವಾದ ಪಡೆದುಕೊಂಡು ಹೋಗಲು ಬಂದಿದ್ಧರು ಎಂದರು.
ಖ್ಯಾತ ನಟ ಕಿಚ್ಚ ಸುದೀಪ್ ಮತ್ತು ಸಂಸದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡಿರುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ಮಾಜಿ ಸಚಿವ ಎಲ್ ಆರ್ ಶಿವರಾಮೇಗೌಡ ಸೇರಿದಂತೆ ಹಲವು ಮುಖಂಡರು ಬಿಜೆಪಿಗೆ ಸೇರಿರುವುದು ಒಳ್ಳೆಯ ಬೆಳವಣಿಗೆ. ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲ್ಲು ಪ್ರಯತ್ನ ಮಾಡಿದ್ದು ಫಲ ನೀಡಲಿದೆ.ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲಿದೆ.ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯದಲ್ಲೂ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದರು.
ಸಿದ್ಧರಾಮಯ್ಯ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ.ಹೀಗಾಗಿ ವರುಣಾದಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ.ಕೇವಲ ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ. ಚುನಾವಣ ಪ್ರಚಾರಕ್ಕೆ ಬರುವುದಿಲ್ಲ ಎಂದು ಧಿಮಾಕಿನಿಂದ ಹೇಳುತ್ತಿದ್ಧಾರೆ. ಇಂತಹ ಧಿಮಾಕಿನ ಮಾತಿನಿಂದಲೇ ಸಿದ್ದರಾಮಯ್ಯಗೆ ಸೋಲಾಗಲಿದೆ. ಸಿದ್ದರಾಮಯ್ಯ ಗೆಲ್ಲುವುದು ಸುಲಭವಲ್ಲ. ಹೀಗಾಗಿ ಕೋಲಾರದಿಂದಲೂ ಟಿಕೆಟ್ ಕೇಳುತ್ತಿದ್ದಾರೆ.ವರುಣಾದಲ್ಲಿ ಗೆಲ್ಲುವ ವಿಶ್ವಾಸ ಇಲ್ಲದ ಕಾರಣ ಕೋಲಾರದಿಂದಲೂ ಟಿಕೆಟ್ ಕೇಳುತ್ತಿದ್ದಾರೆ.ಸಿದ್ಧರಾಮಯ್ಯ ಪಲಾಯನವಾದಿ ಎಂದು ವಾಗ್ದಾಳಿ ನಡೆಸಿದರು.