Advertisement

Loksabha; ಕಾಂಗ್ರೆಸ್ ನಿರ್ನಾಮ ಮಾಡಲು ಜೆಡಿಎಸ್- ಬಿಜೆಪಿ ಮೈತ್ರಿ: ಕೆ.ಎಸ್.ಈಶ್ವರಪ್ಪ

01:52 PM Sep 09, 2023 | Team Udayavani |

ಶಿವಮೊಗ್ಗ: ಲೋಕಸಭಾ ಚುನಾವಣಾ ದೃಷ್ಟಿಯಿಂದ ಹೊಂದಾಣಿಕೆಯಾಗಿದೆ. ಈ ದೇಶದಲ್ಲಿ ‌ಕಾಂಗ್ರೆಸ್ ಬೇಡವೆಂದು ಜನ ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿಸುವ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್ ನಿರ್ನಾಮ ಮಾಡುವ ಒಂದೇ ಉದ್ದೇಶದಿಂದ ಬಿಜೆಪಿ, ಜೆಡಿಎಸ್ ಒಂದಾಗಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಅಂದರೆ ಗ್ರಾ.ಪಂ. ತಾ.ಪಂ‌ ಚುನಾವಣೆಯಲ್ಲ. ಇದು ದೇಶವನ್ನು ಉಳಿಸುವ ಚುನಾವಣೆ. ದೇಶವನ್ನು ಉಳಿಸುವ ಸಲುವಾಗಿ ಬಿಜೆಪಿ ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಪಡೆದಿತ್ತು. ಈ ಬಾರಿ ಒಂದು ಸ್ಥಾನ ಕಾಂಗ್ರೆಸ್ ಗೆ ಬರಬಾರದೆಂದು ಬಿಜೆಪಿ- ಜೆಡಿಎಸ್ ಒಂದಾಗಿದ್ದೇವೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲ್ಲಿದೆ. ನಮ್ಮ ‌ಪ್ರಕಾರ 28 ಕ್ಕೆ 28 ಗೆಲ್ಲಬೇಕು ಅಂತಿದೆ ಆದರೆ ಮಾಧ್ಯಮದಲ್ಲಿ 23 ಅಥವಾ 24 ಎಂದು ಬರುತ್ತಿದೆ. ಇನ್ಜು 5 ಸ್ಥಾನ ಯಾರಿಗೆ ಕೊಡುತ್ತೀರಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಗೆ ಒಂದು ಸ್ಥಾನವೂ ಸಿಗಬಾರದು ಎಂದರು.

ಇದನ್ನೂ ಓದಿ:Ballari; ಯಾರಿಗೂ ಹೆದರಿ‌ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ: ಸೋಮಶೇಖರ್ ರೆಡ್ಡಿ

ಬಿಜೆಪಿ- ಜೆಡಿಎಸ್ ಒಂದಾಗಿದ್ದಕ್ಕೆ ಮತದಾರರು ಸಂತೋಷಪಟ್ಟಿದ್ದಾರೆ. ನರೇಂದ್ರ ಮೋದಿ ಪ್ರಧಾನಮಂತ್ರಿ ಮಾಡಲು ಬಿಜೆಪಿ – ಜೆಡಿಎಸ್ ಒಂದಾಗಿವೆ. ಕಳೆದ ಬಾರಿ ಸಿದ್ದರಾಮಯ್ಯ ಅವರು ಬಿಜೆಪಿ ಒಂದು ಸ್ಥಾನ ಪಡೆಯಲ್ಲ ಅಂದಿದ್ದರು. ಆ ವೇಳೆ ಸಿದ್ದರಾಮಯ್ಯ ಸೋತರು, ಬಿಜೆಪಿ ಹೆಚ್ಚು ಸ್ಥಾನ ಪಡೆಯಿತು. ಕಾಂಗ್ರೆಸ್ ಯಾವಾಗಲೂ ವ್ಯತಿರಿಕ್ತವಾದ ಚಿಂತನೆ ಮಾಡುತ್ತದೆ. ನಾವು ದೇಶಕ್ಕೆ ಅನುಕೂಲವಾಗುವ ಬಗ್ಗೆ ಚಿಂತನೆ ಮಾಡುತ್ತೇವೆ. ಕಾಂಗ್ರೆಸ್ ದೇಶವನ್ನು ನಾಶ ಮಾಡಿದೆ. 9 ವರ್ಷದಲ್ಲಿ ನರೇಂದ್ರ ಮೋದಿ ದೇಶವನ್ನು ಅಭಿವೃದ್ಧಿ ಮಾಡಿರುವುದನ್ನು ಈ ದೇಶದ ಜನ ನೋಡಿದ್ದಾರೆ. ಜೆಡಿಎಸ್ ಜೊತೆ ಭಯದಿಂದ ಮೈತ್ರಿ ಮಾಡಿಕೊಂಡಿಲ್ಲ. ಇದಕ್ಕೆ ಚುನಾವಣೆ ನಂತರ ಉತ್ತರ ಸಿಗುತ್ತದೆ ಎಂದರು.

Advertisement

ಬೈಂದೂರು ಮಾಜಿ ಶಾಸಕ ಸುಕುಮಾರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸುಕುಮಾರ ಶೆಟ್ಟಿ ಬಿಜೆಪಿ ಬಿಟ್ಟ ಕಾರಣ ತಿಳಿಸಲಿ. ಅವರಿಗೆ ಸೀಟ್ ಸಿಗದ ಕಾರಣ ಪಕ್ಷ ಬಿಟ್ಟಿದ್ದಾರೆ. ಬಿಜೆಪಿಯಲ್ಲಿ ಒಂದು ಕೋಟಿಗೂ ಅಧಿಕ ಸದಸ್ಯರಿದ್ದಾರೆ ಎಲ್ಲರಿಗೂ ಸೀಟ್ ಕೊಡಲಾಗಲ್ಲ. ಸುಕುಮಾರಶೆಟ್ಟಿ ಒಂದು ಬಾರಿ ಶಾಸಕರಾಗಿದ್ದಾರೆ. ಎಂಎಲ್ ಎ ಆಗದಿರುವವರು ಸಾಕಷ್ಟು ಕಾರ್ಯಕರ್ತರಿದ್ದಾರೆ. ಎಲ್ಲಾ ಅಧಿಕಾರ ತಮಗೆ ಬೇಕು ಎನ್ನುವುದು ತಪ್ಪು ಎಂದರು.

ಜಗದೀಶ್ ಶೆಟ್ಟರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು, ಅವರಿಗೆ ಈ ಬಾರಿ ಸ್ಥಾನ ಸಿಗಲಿಲ್ಲ ಅದಕ್ಕೆ ಬಕೆಟ್ ಹಿಡಿಯುವವರಿಗೆ ಮಾತ್ರ ಸ್ಥಾನವೆಂದು ಆರೋಪ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆದಾಗ ಯಾವ ಬಕೆಟ್ ಹಿಡಿದಿದ್ದರು. ಅವರು ತಮ್ಮ ಯಾವ ಬಕೆಟ್ ಹಿಡಿದು ಎಂಎಲ್ ಸಿ ಆಗಿದ್ದರು. ನನಗೆ ಅವಕಾಶ ಸಿಕ್ಕರೆ ಬಿಜೆಪಿ ಒಳ್ಳೆಯದು. ಅವಕಾಶ ಸಿಗದಿದ್ದಾಗ ಪಕ್ಷ ದೂಷಿಸುವುದು, ಸರ್ವಾಧಿಕಾರಿ ಪಕ್ಷವೆಂದು ಆರೋಪ ಮಾಡುವುದು. ಈ ರೀತಿ ಆರೋಪ ಮಾಡುವವರ ಮನೋದೌರ್ಬಲ್ಯ ತೋರುತ್ತದೆ ಎಂದರು.

ರಾಜ್ಯದಲ್ಲಿ ಬರಗಾಲ ಘೋಷಣೆ ವಿಳಂಬ ವಿಚಾರಕ್ಕೆ ಮಾತನಾಡಿ, ರಾಜ್ಯದಲ್ಲಿ ಸರಕಾರವೇ ಇಲ್ಲ. ಬೆಳೆ ಪರಿಹಾರ ಕೊಡಿಯೆಂದು ರೈತರು ಕೇಳುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೇ 139 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ರೈತರಿಗೆ ಪರಿಹಾರ ಕೊಡಿ ಎಂದರೆ ಅವರು ವೈಯಕ್ತಿಕವಾಗಿ, ಲವ್ ಮಾಡಿ ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ಆತ್ಮಹತ್ಯೆ ಬೇರೆ ಸಮಸ್ಯೆಗೆ, ಇದಕ್ಕೆಲ್ಲಾ ಪರಿಹಾರ ಕೊಡಲ್ಲ ಎನ್ನುತ್ತಾರೆ. ರೈತರ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡಿರುವ ಸಚಿವರನ್ನು ನೋಡಿಯೇ ಇಲ್ಲ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next