ಕಲಬುರಗಿ: ಸಮ್ಮಿಶ್ರ ಸರ್ಕಾರದ ಹೆಸರಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಜತೆಗೆ ಹೋಗಿದ್ದೇ ತಪ್ಪು. ಸಮ್ಮಿಶ್ರ ಸರ್ಕಾರಗಳಿಂದ ಜೆಡಿಎಸ್ ಗೆ ದೊಡ್ಡ ಹೊಡೆತ ಬಿತ್ತು. ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷವನ್ನು ಹಕ್ಕಿತ್ತುವ ಕೆಲಸ ಮಾಡಿವೆ ಎಂದು ಮಾಜಿ ಶಾಸಕರಾದ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತ ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೊಂದಿಗೆ ಸೇರಿಕೊಂಡು ಸಮ್ಮಿಶ್ರ ಸರ್ಕಾರಗಳು ರಚನೆ ಮಾಡುವ ಮುನ್ನ ಜೆಡಿಎಸ್ ಬಲಿಷ್ಠವಾಗಿತ್ತು. ಆದರೆ, ಸಮ್ಮಿಶ್ರ ಸರ್ಕಾರಗಳಿಂದಾಗಿ ಜೆಡಿಎಸ್ ಹಾಳಾಯಿತು. ಬಿಜೆಪಿ ಜತೆ ಸೇರಿ 20 ತಿಂಗಳ ಸರ್ಕಾರ ಮಾಡಿದ್ದು ಮತ್ತು ಕಾಂಗ್ರೆಸ್ ನೊಂದಿಗೆ 10 ತಿಂಗಳ ಸರ್ಕಾರ ನಡೆಸಿದ್ದು ಎರಡೂ ತಪ್ಪು ಎಂದು ಅಭಿಪ್ರಾಯ ಪಟ್ಟರು.
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್ ಪ್ರಬಲವಾಗಿತ್ತು. ಸಮ್ಮಿಶ್ರ ಸರ್ಕಾರಗಳು ರಚನೆ ಮಾಡದೆ ಇದ್ದರೆ, ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಎಷ್ಟೇ ಸ್ಥಾನಗಳು ಗೆದ್ದರೂ ಪ್ರತಿ ಪಕ್ಷವಾಗಿ ಹೋರಾಟ ಮಾಡಬಹುದಾಗಿತ್ತು ಎಂದ ಅವರು, ಈ ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯವಾಗುತ್ತಿದೆ. ಇದಕ್ಕಾಗಿ ಯುವಕರ ಪಡೆ ಕಟ್ಟಲಾಗುತ್ತಿದೆ. ಮೇಲಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಕೆ ಒತ್ತು ಕೊಡಲಾಗುತ್ತಿದೆ ಎಂದರು.
ಹೊರ ಗುತ್ತಿಗೆ ನೌಕರರ ಸೇವಾ ಭದ್ರತೆಗೆ ಶ್ರಮ: ಇಂಧನ ಇಲಾಖೆಯಲ್ಲಿ 15-20 ವರ್ಷಗಳಿಂದ ದುಡಿಯುತ್ತಿರುವ ಹೊರ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಇಲ್ಲದಂತೆ ಆಗಿದೆ. ಹೀಗಾಗಿ ಆ ನೌಕರರ ಹಿತಕಾಯುವ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದು ಮಾಹಿತಿ ಕೋರಿದ್ದಾರೆ ಎಂದು ದತ್ತ ಇದೇ ವೇಳೆ ತಿಳಿಸಿದರು.
ಜೆಸ್ಕಾಂ, ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಎಲ್ಲ ವಿದ್ಯುತ್ ಕಂಪನಿಗಳಿಂದ ಗುತ್ತಿಗೆ ನೌಕರರ ಮಾಹಿತಿ ಕೋರಲಾಗಿದೆ. ಮಾಹಿತಿ ನೀಡುವಂತೆ ಮುಖ್ಯಮಂತ್ರಿಗಳು ಇಂಧನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ, ಜೆಸ್ಕಾಂ ಸೇರಿ ಕೆಲವರು ಕೊಟ್ಟಿಲ್ಲ. ಹೀಗಾಗಿ ಖುದ್ದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ, ಮಾಹಿತಿ ಸಂಗ್ರಹಿಸಿದ್ದೇನೆ ಎಂದು ಹೇಳಿದರು.