ಬೆಂಗಳೂರು: ತೀವ್ರ ಹಗ್ಗಜಗ್ಗಾಟದ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ಪೂರ್ಣಗೊಂಡಿದ್ದು, 20:8 ಆಧಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಜೆಡಿಎಸ್‌ಗೆ ಮಂಡ್ಯ, ಹಾಸನ, ಶಿವಮೊಗ್ಗ, ತುಮಕೂರು, ಬೆಂಗಳೂರು ಉತ್ತರ, ವಿಜಯಪುರ, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ ಕ್ಷೇತ್ರ ಬಿಟ್ಟುಕೊಡಲಾಗಿದೆ. ಮೈಸೂರು-ಕೊಡಗು ಕ್ಷೇತ್ರಕ್ಕೆ ಪಟ್ಟು ಹಿಡಿದಿದ್ದ ಜೆಡಿಎಸ್‌ಗೆ ಆ ಕ್ಷೇತ್ರ ಸಿಗದಂತೆ ನೋಡಿಕೊಳ್ಳುವಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದಾರೆ.
ಈ ಮೂಲಕ ಮೈಸೂರಿನಲ್ಲಿ ಸ್ಪರ್ಧಿಸಲು ಮುಂದಾಗಿದ್ದ ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ.ಆದರೆ, ತುಮಕೂರು ಕ್ಷೇತ್ರ ಬಿಟ್ಟುಕೊಡಲು ಆಗುವುದಿಲ್ಲ ಎಂದು ಹೈಕಮಾಂಡ್ ಮುಂದೆ ಹೇಳಿದ್ದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಗೆ ತೀವ್ರ ಹಿನ್ನಡೆಯುಂಟಾಗಿದೆ. ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ ಅವರು ಬುಧವಾರ ಕೇರಳ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಸೀಟು ಹಂಚಿಕೆ ಪೂರ್ಣಗೊಳಿಸಿದರು. ನಂತರ ಜೆಡಿಎಸ್‌ನಿಂದ ಅಧಿಕೃತವಾಗಿ ಪ್ರಕಟಿಸಲಾಯಿತು.ಮೈಸೂರಿನಿಂದ ಸ್ಪರ್ಧೆ ಮಾಡಲು ಬಯಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಮಂಡ್ಯದಿಂದ ನಿಖೀಲ್ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್ ರೇವಣ್ಣ, ಶಿವಮೊಗ್ಗದಿಂದ ಮಧು ಬಂಗಾರಪ್ಪ ಸ್ಪರ್ಧೆ ಖಚಿತವಾಗಿದೆ. ದೇವೇಗೌಡರು ಬೆಂಗಳೂರು ಉತ್ತರದಲ್ಲಿ ಸ್ಪರ್ಧೆ ಮಾಡಿದರೆ ತುಮಕೂರು ಕ್ಷೇತ್ರಕ್ಕೆ ಎಂ.ಟಿ.ಕೃಷ್ಣಪ್ಪ, ರಮೇಶ್‌ಬಾಬು, ನಿಂಗಪ್ಪ ಅವರಲ್ಲಿ ಒಬ್ಬರು ಅಭ್ಯರ್ಥಿಯಾಗಲಿದ್ದಾರೆ. ಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹಿಂದುಳಿದ ವರ್ಗದ ಅಭ್ಯರ್ಥಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ವಿಜಯಪುರ, ಉತ್ತರ ಕನ್ನಡ, ಉಡುಪಿ -ಚಿಕ್ಕಮಗಳೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹುಡುಕಬೇಕಾಗಿದೆ. ಬಿಜೆಪಿಯಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕರೆ ಟಿಕೆಟ್ ಆಕಾಂಕ್ಷಿ ಜಯಪ್ರಕಾಶ್ ಹೆಗ್ಡೆ ಅವರನ್ನು ಜೆಡಿಎಸ್‌ಗೆ ಸೆಳೆಯುವ ಸಾಧ್ಯತೆಯಿದೆ. ಉತ್ತರ ಕನ್ನಡ ಕ್ಷೇತ್ರದಿಂದ ಆನಂದ್ ಆಸ್ನೋಟಿಕರ್ ಅಥವಾ ಶಶಿಭೂಷಣ ಹೆಗಡೆ ಅವರ ಹೆಸರುಗಳು ಕೇಳಿಬರುತ್ತಿವೆ ತಿಳಿದುಬಂದಿದೆ.
ಜೆಡಿಎಸ್ ಸಭೆ: ಸೀಟು ಹಂಚಿಕೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರು ಬುಧವಾರ ರಾತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮುಖಂಡರ ಜತೆ ಸಭೆ ನಡೆಸಿದರು. ಮೈಸೂರು ಕ್ಷೇತ್ರ ಕಾಂಗ್ರೆಸ್ ಬಿಟ್ಟುಕೊಡದ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಕ್ಷೇತ್ರಗಳು ನಮಗೆ ಅಗತ್ಯ ಇರಲಿಲ್ಲ. ಅದರ ಬದಲು ಮೈಸೂರು ನೀಡಿ ಏಳು ಕ್ಷೇತ್ರಗಳೇ ಸಾಕಾಗಿತ್ತು ಎಂಬ ಮಾತುಗಳು ಕೇಳಿಬಂದವು.
ಕೈನಲ್ಲಿ ಆಕ್ರೋಶ: ಕಾಂಗ್ರೆಸ್ ಸಂಸದರುಪ್ರತಿನಿಧಿಸುತ್ತಿದ್ದ ತುಮಕೂರು ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಅಲ್ಲಿನ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಉತ್ತರ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್‌ನಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ.
ಗೆಲುವಿನ ಆಶಾಭಾವ
ಸಮುದಾಯದ ಹೆಚ್ಚಾಗಿರುವುದರಿಂದ ಅಲ್ಲಿ ಗೆಲ್ಲುವ ಆಶಾಭಾವನೆ ಜೆಡಿಎಸ್ ಹೊಂದಿದೆ. ಮೈಸೂರು ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪದಿದ್ದಾಗ ದೇವೇಗೌಡರ ಸ್ಪರ್ಧೆಗಾಗಿ ತುಮಕೂರು ಕ್ಷೇತ್ರ ಪಡೆಯಲಾಯಿತು ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಪಟ್ಟಿ
ಕ್ಷೇತ್ರ ಸಂಭಾವ್ಯರು ಹಾಸನ ಪ್ರಜ್ವಲ್ ರೇವಣ್ಣ
ಮಂಡ್ಯ ನಿಖೀಲ್ ಕುಮಾರಸ್ವಾಮಿ
ಶಿವಮೊಗ್ಗ ಮಧು ಬಂಗಾರಪ್ಪ
ಬೆಂ.ಉತ್ತರ ದೇವೇಗೌಡ/ಬೇರೊಬ್ಬರಿಗೆ
ತುಮಕೂರು ದೇವೇಗೌಡ/ಬೇರೊಬ್ಬರಿಗೆ
ಉತ್ತರ ಕನ್ನಡ ಆನಂದ್ ಅಸ್ನೋಟಿಕರ್/ಶಶಿಭೂಷಣ್ ಹೆಗ್ಡೆ
ಉಡುಪಿ-ಚಿಕ್ಕಮಗಳೂರು ಜಯಪ್ರಕಾಶ್ ಹೆಗ್ಡೆ (ಜೆಡಿಎಸ್‌ಗೆ ಬಂದರೆ)
ವಿಜಯಪುರ ಇನ್ನೂ ನಿರ್ಧಾರವಾಗಿಲ್ಲ
ಯಾವುದೇ ಗೊಂದಲವಿಲ್ಲದೆ ಸೀಟು ಹಂಚಿಕೆ ಅಂತ್ಯ ವಾಗಿದೆ. ಮಾ.16ಕ್ಕೆ ಮೊದಲ ಪಟ್ಟಿ ರಿಲೀಸ್.
● ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ
ದೇವೇಗೌಡರು ತುಮಕೂರು ಜಿಲ್ಲೆ ಹಾಳು ಮಾಡಿದ್ದಾರೆ.ಜಿಲ್ಲೆಗೆ ಅವರ ಕೊಡುಗೆ ಏನು? ನಾನು ಪಕ್ಷೇತರನಾಗಿ
ಸ್ಪರ್ಧಿಸಲು ಸಿದ್ಧನಿದ್ದೇನೆ.
● ಕೆ.ಎನ್.ರಾಜಣ್ಣ, ಕಾಂಗ್ರೆಸ್ ನಾಯಕ