Advertisement

ನ. 8ರಿಂದ 15ರವರೆಗೆ ಜೆಡಿಎಸ್‌ ಎರಡನೇ ಹಂತದ ಕಾರ್ಯಾಗಾರ ಆರಂಭ: ಎಚ್‌ಡಿಕೆ

08:59 PM Nov 06, 2021 | Team Udayavani |

ಬೆಂಗಳೂರು: ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫ‌ಲಿತಾಂಶದ ಬಳಿಕ ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್‌ ಎರಡನೇ ಹಂತದ ಕಾರ್ಯಾಗಾರ ಹಮ್ಮಿಕೊಂಡಿದೆ.

Advertisement

ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಪಕ್ಷ ಸಂಘಟನೆಗೆ ಬಿಡದಿ ತೋಟದಲ್ಲಿ ಕಾರ್ಯಗಾರ ನಡೆಸಿದ ನಂತರ ಇದೀಗ ಮತ್ತೆ ಎರಡನೇ ಹಂತದ ಜೆಡಿಎಸ್‌ ಸಂಘಟನಾ ಕಾರ್ಯಗಾರವನ್ನು ಸೋಮವಾರದಿಂದ (ನವೆಂಬರ್‌ 8ರಿಂದ 15ರವರೆಗೆ )ಪಕ್ಷದ ರಾಜ್ಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಲ್ಲ ಹಂತಗಳಲ್ಲೂ ಪಕ್ಷವನ್ನು ಸಂಘಟನೆ ಮಾಡಲು ಈ ಕಾರ್ಯಗಾರ ಸಹಕಾರಿ ಆಗಲಿದೆ. ಎಂಟು ದಿನಗಳ ಕಾಲ ಹಾಲಿ, ಮಾಜಿ ಶಾಸಕರು, ಪದಾಧಿಕಾರಿಗಳ ಸಭೆ ಇಲ್ಲಿ ನಡೆಯಲಿದೆ. ನ. 15ರಂದು ಈ ಕಾರ್ಯಗಾರ ಅಂತ್ಯವಾಗಲಿದೆ. ದಿನಕ್ಕೆ ಎರಡು ಜಿಲ್ಲೆಗಳನ್ನು ಒಳಗೊಂಡಂತೆ ಸಭೆಗಳನ್ನು ನಡೆಸಲಾಗುವುದು. ಈ ಸಭೆಯಲ್ಲಿ ಮುಂದಿನ ಚುನಾವಣಾ ಸಿದ್ಧತೆ ಸಂಬಂಧ ಚರ್ಚಿಸಲಿದ್ದೇವೆ. ಮಹತ್ವದ ಈ ಸಭೆಯಲ್ಲಿ ಭಾಗಿಯಾಗುವ ಎಲ್ಲರಿಗೂ ಸ್ಪಷ್ಟ ಮಾರ್ಗಸೂಚಿ ನೀಡಲಾಗುವುದು. ತದನಂತರ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಸೂಚಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

ನಾವು ಗುರಿ ಮುಟ್ಟುತ್ತೇವೆ:
ಕೆಲವರು ನಮ್ಮ ಮಿಷನ್‌ 123 ಬಗ್ಗೆ ಲಘುವಾಗಿ ಮಾತನ್ನಾಡುತ್ತಿದ್ದಾರೆ. ಹಾಗೆ ಮಾತನಾಡುವ ಅಗತ್ಯವಿಲ್ಲ. 2023ರ ನಮ್ಮ ಗುರಿ ಏನಿದೆ ಅದನ್ನು ಮುಟ್ಟುತ್ತೇವೆ. ನಮ್ಮ ದಾರಿ ಮತ್ತು ಗುರಿಯ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಯಾರೂ ಈ ಬಗ್ಗೆ ಉಪದೇಶ ಮಾಡುವ ಅಥವಾ ಲಘುವಾಗಿ ಮಾತನಾಡುವ ಅಗತ್ಯ ಇಲ್ಲ ಎಂದು ಕುಮಾರಸ್ವಾಮಿ ಇದೇ ವೇಳೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನಸಪರಿಷತ್‌ ಮಾಜಿ ಸದಸ್ಯ ಟಿ.ಎ. ಶರವಣ ಉಪಸ್ಥಿತರಿದ್ದರು.

ಇದನ್ನೂ ಓದಿ:ಕಾಂಗ್ರೆಸ್ ಇರುವ ರಾಜ್ಯಗಳಲ್ಲಿ ಇಂಧನ ಬೆಲೆ ಇಳಿಕೆ ಆಗಿದೆಯಾ: ಪ್ರಹ್ಲಾದ ಜೋಶಿ

Advertisement

ಪಕ್ಷ ಬಿಟ್ಟವರಿಂದ ಸಂಘಟನೆಗೆ ಶಕ್ತಿ ಬಂದಿಲ್ಲ:
ಗುಬ್ಬಿ ಶಾಸಕ ಶ್ರೀನಿವಾಸ್‌ ಹಾಗೂ ವಿಧಾನಪರಿಷತ್‌ ಸದಸ್ಯ ಸಿ.ಆರ್‌. ಮನೋಹರ್‌ ಅವರು ಪಕ್ಷ ಬಿಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಪಕ್ಷ ಬಿಟ್ಟುವರಿಂದ ಸಂಘಟನೆಗೆ ಯಾವುದೇ ಶಕ್ತಿ ಬಂದಿಲ್ಲ. ಪಕ್ಷದಿಂದ ಅನುಕೂಲ ಪಡೆದುಕೊಂಡು ಕೆಲವರು ಹೋಗುತ್ತಿದ್ದಾರೆ. ಯಾರು ಯಾವಾಗ ಪಕ್ಷ ಬಿಡುತ್ತಾರೆ ಎನ್ನುವ ಮಾಹಿತಿ ನನಗೆ ಎರಡು ವರ್ಷಗಳ ಹಿಂದೆಯೇ ಇದೆ.

ಜನತಾ ಪತ್ರಿಕೆ ಲೋಕಾರ್ಪಣೆ:
ಪಕ್ಷದ ವಿಚಾರಗಳನ್ನು ಜನತೆ ಮತ್ತು ಪಕ್ಷದ ಕಾರ್ಯಕರ್ತರಿಗೆ ತಿಳಿಸುವ ಮಾಸಿಕ ‘ ಜನತಾ ಪತ್ರಿಕೆ ‘ ಯನ್ನು ಸೋಮವಾರ ಬಿಡುಗಡೆ ಮಾಡಲಾಗುವುದು. ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ಅವರು ಪತ್ರಿಕೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. ನನ್ನ ಸಂಪಾದಕೀಯ ನೇತೃತ್ವದಲ್ಲಿ ಈ ಪತ್ರಿಕೆ ಮೂಡಿ ಬರುತ್ತಿದ್ದು, ನಾಡಿನ ಜನರ ಆಶೋತ್ತರಗಳನ್ನು ಈಡೇರಿಸಲು ಹಾಗೂ ಪಕ್ಷದ ದನಿಯನ್ನು ಜನರಿಗೆ ಮುಟ್ಟಿಸುವ ಗುರಿಯನ್ನು ಹೊಂದಿದೆ.

ಕಾರ್ಯಕರ್ತರಿಗೆ ಪಕ್ಷದ ಬಗ್ಗೆ ದಿಕ್ಸೂಚಿಯಾಗಿ ಹಾಗೂ ಮಾರ್ಗದರ್ಶಿಯಾಗಿ ಜನತಾ ಪತ್ರಿಕೆ ಮುನ್ನಡೆಸುತ್ತದೆ. ಅಲ್ಲದೆ, ನಾಡು, ನುಡಿ, ನೆಲ, ಜಲ, ಭಾಷೆ ಇತ್ಯಾದಿ ವಿಷಯಗಳನ್ನು ಒಳಗೊಳ್ಳುವ ಪತ್ರಿಕೆ ಇದಾಗಿದೆ ಎಂದು ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next